×
Ad

ಡಿ.26ರಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ಲೋಕಾರ್ಪಣೆ

Update: 2023-12-20 22:23 IST

ಮಂಗಳೂರು: ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಲಾಪೋಷಕರ ಸಹಕಾರದಿಂದ ಸಿರಿಬಾಗಿಲಿನಲ್ಲಿ ನಿರ್ಮಿಸಲಾದ ‘ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ’ ಡಿ.26ರಂದು ಲೋಕಾರ್ಪಣೆಗೊಳ್ಳಲಿದೆ ಪ್ರತಿಷ್ಠಾನದ ಅಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಭವನ ಲೋಕಾರ್ಪಣೆಗೊಳಿಸುವರು. ಅಂದು ಮಧ್ಯಾಹ್ನ 2ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು.

ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು. ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸುವರು. ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್, ರಾಜೇಶ್ ನಾಯ್ಕ್, ಹರೀಶ್ ಪೂಂಜಾ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಗೋಪಾಲಕೃಷ್ಣ ಅಭ್ಯಾಗತರಾಗಿ ಭಾಗವಹಿಸುವರು ಎಂದು ವಿವರಿಸಿದರು.

ಯಕ್ಷದರ್ಶಿನಿಯನ್ನು ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು, ಗ್ರಂಥಾಲಯವನ್ನು ಉದ್ಯಮಿ ಕೆ.ಕೆ. ಶೆಟ್ಟಿ ಉದ್ಘಾಟಿಸುವರು. ಮರೆಯಲಾಗದ ಮಹಾನುಭಾವರು ಛಾಯಾಚಿತ್ರ ಫಲಕವನ್ನು ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅನಾವರಣ ಮಾಡುವರು. ಅಗಲಿಹೋದ ಕಲಾವಿದರ ಪರಿಚಯವುಳ್ಳ ಮರೆಯಲಾಗದ ಮಹಾನುಭಾವರು ಪುಸ್ತಕ ಸಹಿತ 7 ಪುಸ್ತಕಗಳು ಬಿಡುಗಡೆಗೊಳ್ಳಲಿವೆ. ವೃತ್ತಿ ಹಾಗೂ ಹವ್ಯಾಸಿ ಭಾಗವತರಿಂದ ಕುಂಬ್ಳೆ ಪಾರ್ತಿ ಸುಬ್ಬ ಅವರ ಕೃತಿಗಳ ಗಾನಾರ್ಚನೆ ನಡೆಯಲಿದೆ. ಸಂಜೆ 7ಕ್ಕೆ ಧರ್ಮಸ್ಥಳ ಮೇಳದಿಂದ ‘ನಂದಿ ನಂದಿನಿ’ ಯಕ್ಷಗಾನ ಬಯಲಾಟ ಏರ್ಪಡಿಸಲಾಗಿದೆ ಎಂದರು.

ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಾಂಸ್ಕತಿಕ ಭವನದಲ್ಲಿ ಯಕ್ಷಗಾನ ಮ್ಯೂಸಿಯಂ, ಗ್ರಂಥ ಭಂಡಾರ, 250ಕ್ಕಿಂತಲೂ ಹೆಚ್ಚು ಯಕ್ಷಗಾನದ ಕೀರ್ತಿಶೇಷರ ಭಾವಚಿತ್ರ ಸಿದ್ಧಗೊಂಡಿದೆ. ತೆಂಕುತಿಟ್ಟು ಯಕ್ಷಗಾನದ ಸಮಗ್ರ ಅಧ್ಯಯನಕ್ಕೆ ಈ ಭವನ ಮೀಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ಸ್ವಾಗತ ಸಮಿತಿ ಸಂಚಾಲಕರಾದ ಡಾ. ಜಯಪ್ರಕಾಶ ತಟ್ಟೆತೊಡಿ, ದಾಮೋದರ ಶರ್ಮ ಬಾರ್ಕೂರು, ಜಗದೀಶ ಕೂಡ್ಲು, ಯೋಗೀಶ್ ರಾವ್ ಚಿಗುರುಪಾದೆ, ಡಾ. ಶ್ರುತಕೀರ್ತಿರಾಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News