×
Ad

ಜು.26: ದ.ಕ.ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್

Update: 2024-07-25 21:36 IST

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಗುರುವಾರ ಸಾಧಾರಣ ಮಳೆಯಾಗಿದೆ. ಈ ನಡುವೆ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾದ ಕಾರಣ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿತ್ತು. ಭಾರತೀಯ ಹವಾಮಾನ ಇಲಾಖೆಯು ಜು.26ರಂದು ಆರೆಂಜ್ ಅಲರ್ಟ್ ಘೋಷಿಸಿದೆ.

ಚಿಲಿಂಬಿಯಲ್ಲಿ ಬುಧವಾರ ರಾತ್ರಿ ಕಟ್ಟಡವೊಂದರ ಮೇಲಿದ್ದ ಕಬ್ಬಿಣದ ಶೀಟ್ ಮತ್ತು ರಾಡ್ ಬಿದ್ದು ನೀರಿನ ಟ್ಯಾಂಕ್ ಹಾಗೂ ಮನೆಯೊಂದರ ಫೈಬರ್ ಶೀಟ್ ಸಂಪೂರ್ಣ ಹಾನಿಗೊಳಗಾಗಿದೆ. ಈ ವೇಳೆ ಸಿಸ್ಟರ್ ಲೂಸಿ ಡಿಸೋಜ ಸಹಿತ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಸುಮಾರು 25 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ.

ಚಿಲಿಂಬಿಯಲ್ಲಿ ಭಾರಿ ಗಾಳಿಗೆ ಶೀಟ್ ಹಾಗೂ ಕಬ್ಬಿಣದ ರಾಡ್ ಬಿದ್ದು ಆಟೊರಿಕ್ಷಾ, ದ್ವಿಚಕ್ರ ವಾಹನ ಜಖಂಗೊಂಡ ಘಟನೆಯೂ ನಡೆದಿದೆ.

*ಗುರುವಾರ ಬೆಳಗ್ಗಿನವರೆಗೆ ಬೆಳ್ತಂಗಡಿಯಲ್ಲಿ ಗರಿಷ್ಠ ೮೮.೫ ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ ೬೨.೧ ಮಿ.ಮೀ. ಆಗಿದೆ. ಬಂಟ್ವಾಳ ೫೫.೧ ಮಿ.ಮೀ, ಮಂಗಳೂರು ೫೫.೪ ಮಿ.ಮೀ, ಪುತ್ತೂರು ೩೯.೧ ಮಿ.ಮೀ, ಸುಳ್ಯ ೩೭.೫ ಮಿ.ಮೀ, ಮೂಡುಬಿದಿರೆ ೬೩.೪ ಮಿ.ಮೀ, ಕಡಬ ೬೯.೩ ಮಿ.ಮೀ, ಮೂಲ್ಕಿ ೩೬.೫ ಮಿ.ಮೀ, ಉಳ್ಳಾಲ ೩೪.೪ ಮಿ.ಮೀ. ಮಳೆಯಾಗಿದೆ. ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿಯು ೨೮.೫ ಮೀಟರ್, ಬಂಟ್ವಾಳದಲ್ಲಿ ನೇತ್ರಾವತಿ ನದಿ ೭.೧ ಮೀಟರ್‌ನಲ್ಲಿ ಹರಿಯುತ್ತಿದೆ.

*ನದಿಯಲ್ಲಿ ಪ್ರವಾಹ ಏರಿಕೆ

ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾದ ಕಾರಣ ಜಿಲ್ಲೆಯ ನೇತ್ರಾವತಿ ಮತ್ತು ಕುಮಾರಧಾರ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಬುಧವಾರ ರಾತ್ರಿ ಚಾರ್ಮಾಡಿ, ಮಲೆಮನೆ ಬೆಟ್ಟ, ದೊಡ್ಡೇರಿ ಬೆಟ್ಟ, ರಾಮನಗುಡ್ಡ, ಹೊಸಮನೆ ಗುಡ್ಡ, ಹೊಸಮನೆ ಗುಡ್ಡ ಪ್ರದೇಶಗಳಲ್ಲಿ, ಬಳ್ಳಾಲರಾಯನ ದುರ್ಗ, ಮಿಂಚಳ್ಳಿ, ಎರ್ಮಾಯಿ ಬೆಟ್ಟ, ಏರಿಕಲ್ಲು, ಕೊಡೆಕಲ್ಲು, ಮಿಂಚುಕಲ್ಲು, ಬಾರೆಕಲ್ಲು ಬೆಟ್ಟಗಳಲ್ಲಿ ನಿರಂತರ ಮಳೆಯಾಗಿದ ಕಾರಣ ಗುರುವಾರ ಬೆಳಗ್ಗೆ ನೇತ್ರಾವತಿ ನದಿನೀರಿನ ಮಟ್ಟ ಹೆಚ್ಚಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News