ಅ.27: ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ಮುಖ್ಯಮಂತ್ರಿ ಚಾಲನೆ
ಮಂಗಳೂರು,ಅ.23: ನಗರದ ಉರ್ವಾ ಒಳಾಂಗಣ ಕ್ರೀಡಾಂಗಣದಲ್ಲಿ ಅ.27ರಂದು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾಟ ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್-2025 ನಡೆಯಲಿದೆ. ಈ ನಿಟ್ಟಿನಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿದ್ಧತಾ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆಯುವ ಈ ಕ್ರೀಡಾಕೂಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಕ್ರೀಡಾಕೂಟಕ್ಕೆ ಯಾವುದೇ ಲೋಪವಾಗದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಏರ್ಪಡಿಸಬೇಕು. ಜಿಲ್ಲೆಯ ಕ್ರೀಡಾ ಮೂಲ ಸೌಲಭ್ಯಗಳು ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂದು ಹೇಳಿದರು.
ಈ ಕ್ರೀಡಾಕೂಟದಲ್ಲಿ ದೇಶ-ದೇಶಗಳಿಂದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅವರಿಗೆ ಕ್ರೀಡಾ ಸೌಲಭ್ಯಗಳು, ವಸತಿ ವ್ಯವಸ್ಥೆಗಳನ್ನು ಉತ್ತಮ ರೀತಿಯಲ್ಲಿ ಒದಗಿಸಬೇಕು. ಕ್ರೀಡಾಂಗಣದ ಒಳಗೆ ಎಲ್ಲಾ ತಾಂತ್ರಿಕ ಅಂಶಗಳನ್ನು ಅಚ್ಚುಕಟ್ಟುಗೊಳಿಸಬೇಕು. ಕ್ರೀಡಾಪಟುಗಳು ಮತ್ತು ತೀರ್ಪುಗಾರರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಡಿಸಿ ಸೂಚಿಸಿದರು.
ಕ್ರೀಡಾಕೂಟಕ್ಕೆ ಬರುವ ವಾಹನಗಳಿಗೆ ಉರ್ವ ಮಾರ್ಕೆಟ್ ಕ್ರೀಡಾಂಗಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣಕ್ಕೆ ಹೋಗಿ ಬರುವ ಲೇಡಿಹಿಲ್‌ನಿಂದ ಉರ್ವಮಾರ್ಕೆಟ್‌ವರೆಗಿನ ರಸ್ತೆಯನ್ನು ಸುಂದರಗೊಳಿಸಬೇಕು. ತ್ಯಾಜ್ಯ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ಮಾಡಬೇಕು ಎಂದು ಮಹಾನಗರಪಾಲಿಕೆಯ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಈ ಕ್ರೀಡಾಕೂಟದಲ್ಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಬಿಂಬಿಸುವ ಪ್ರದರ್ಶನ ಹಾಗೂ ಮಾಹಿತಿ ಕೇಂದ್ರ ಸಿದ್ಧಗೊಳಿಸಬೇಕು. ಕ್ರೀಡಾಪಟುಗಳು ಪ್ರವಾಸಿ ತಾಣಗಳಿಗೆ ಹೋಗಲಿಚ್ಛಿಸಿದ್ದಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆಗೆ ನಿದೇರ್ಶನ ನೀಡಿದರು.
ಕ್ರೀಡಾಪಟುಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಆರೋಗ್ಯ ಕೇಂದ್ರವನ್ನು ಕ್ರೀಡಾಂಗಣದಲ್ಲಿ ಸಜ್ಜುಗೊಳಿ ಸಬೇಕು. ಕ್ರೀಡಾ ವೈದ್ಯಕೀಯ ತಜ್ಞರನ್ನು ನಿಯೋಜಿಸಬೇಕು ಎಂದು ಆರೋಗ್ಯಾಧಿಕಾರಿಗೆ ಸೂಚಿಸಿದರು.
ಸಭೆಯಲ್ಲಿ ಉಪ ಪೋಲಿಸ್ ಆಯುಕ್ತ ಮಿಥುನ್ ಎಚ್.ಎನ್., ಸ್ಮಾರ್ಟ್ ಸಿಟಿ ಎಂ.ಡಿ ಸಂತೋಷ್ ಕುಮಾರ್, ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.