×
Ad

ಪಶುವೈದ್ಯಕೀಯ ಶಿಕ್ಷಣದಲ್ಲಿ ಮೈಲುಗಲ್ಲು; ತುಂಬೆ ಗ್ರೂಪ್ ನ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಪಶುವೈದ್ಯಕೀಯ ಪದವಿಗೆ CAAಯಿಂದ ಅನುಮೋದನೆ

Update: 2025-11-10 23:05 IST

ಅಜ್ಮಾನ್, ನ. 10: ತುಂಬೆ ಗ್ರೂಪ್ ನ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (GMU) ಯಲ್ಲಿ ಪ್ರಾರಂಭವಾಗುತ್ತಿರುವ ಡಾಕ್ಟರ್ ಆಫ್ ವೆಟರ್ನರಿ ಮೆಡಿಸಿನ್ (DVM) ಪದವಿಗೆ ಕಮಿಷನ್ ಫಾರ್ ಅಕಾಡೆಮಿಕ್ ಅಕ್ರಿಡಿಟೇಶನ್ (CAA) ಆರಂಭಿಕ ಅನುಮೋದನೆ ನೀಡಿದೆ.

ಮಾನವ ಆರೋಗ್ಯ, ಪ್ರಾಣಿಗಳ ಯೋಗಕ್ಷೇಮ ಮತ್ತು ಪರಿಸರ ಸುಸ್ಥಿರತೆಯನ್ನು ಪರಸ್ಪರ ಸಂಬಂಧಿಸುವ ‘ಒನ್ ಹೆಲ್ತ್ ಫಿಲಾಸಫಿ’ ತತ್ವದಡಿ ತುಂಬೆ ಗ್ರೂಪ್ ಪಶುವೈದ್ಯಕೀಯ ಶಿಕ್ಷಣ ಮತ್ತು ಸೇವಾ ವಲಯದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ.

“ಶಾರ್ಜಾದ ಮುವೈಲೇಹ್‌ನಲ್ಲಿ ತುಂಬೆ ಪಶುವೈದ್ಯಕೀಯ ಕ್ಲಿನಿಕ್ ಈಗಾಗಲೇ ಕಾರ್ಯಾರಂಭ ಮಾಡಿದೆ. ತುಂಬೆ ಮೆಡಿಸಿಟಿಯಲ್ಲಿ ಪಶುವೈದ್ಯಕೀಯ ಆಸ್ಪತ್ರೆ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, 2027ರ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಜೊತೆಗೆ ದೊಡ್ಡ ಮತ್ತು ಸಣ್ಣ ಪ್ರಾಣಿಗಳಿಗಾಗಿ ತುಂಬೆ ಫಾರ್ಮ್, ವೆಟರಿನರಿ ಲ್ಯಾಬ್, ದುಬೈ ಮತ್ತು ರಾಸ್ ಅಲ್ ಖೈಮಾದಲ್ಲಿ ವೆಟರಿನರಿ ಫಾರ್ಮಸಿ ಮತ್ತು ಕ್ಲಿನಿಕ್‌ಗಳು ಸಹ ಸ್ಥಾಪನೆಯಾಗಲಿವೆ. ಇವುಗಳು ತುಂಬೆ ಪಶುವೈದ್ಯಕೀಯ ಕಾಲೇಜಿನ ಭಾಗವಾಗಿರುತ್ತದೆ” ಎಂದು ತುಂಬೆ ಗ್ರೂಪ್‌ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯಿದೀನ್ ಅವರು ತಿಳಿಸಿದ್ದಾರೆ.

ಗಲ್ಫ್‌ ಮೆಡಿಕಲ್‌ ಯುನಿವರ್ಸಿಟಿಯ ತುಂಬೆ ಕಾಲೇಜ್ ಆಫ್ ವೆಟರ್ನರಿ ಮೆಡಿಸಿನ್ ಅಡಿಯಲ್ಲಿ ಪ್ರಾರಂಭವಾಗುತ್ತಿರುವ ಡಾಕ್ಟರ್ ಆಫ್ ವೆಟರ್ನರಿ ಮೆಡಿಸಿನ್ ಪದವಿ ಕಾರ್ಯಕ್ರಮವು ಪ್ರತಿ ವರ್ಷ 60 ವಿದ್ಯಾರ್ಥಿಗಳ ಪ್ರವೇಶದೊಂದಿಗೆ ಅಂತರರಾಷ್ಟ್ರೀಯ ಮಟ್ಟದ ಪಠ್ಯಕ್ರಮ, ಸಂಶೋಧನಾ ಅವಕಾಶಗಳು ಹಾಗೂ 30ಕ್ಕೂ ಹೆಚ್ಚು ಕ್ಲಿನಿಕಲ್ ತರಬೇತಿಯನ್ನು ಒದಗಿಸುತ್ತದೆ. ಲಂಡನ್‌ನ ರಾಯಲ್ ವೆಟರಿನರಿ ಕಾಲೇಜು, ರಷ್ಯಾದ ಡಾನ್ ಸ್ಟೇಟ್ ಟೆಕ್ನಿಕಲ್ ಯೂನಿವರ್ಸಿಟಿ ಸೇರಿದಂತೆ ಯುರೋಪ್, ಏಷ್ಯಾ ಹಾಗೂ ಮಧ್ಯಪ್ರಾಚ್ಯದ ಪ್ರಮುಖ ಸಂಸ್ಥೆಗಳೊಂದಿಗೆ ಗಲ್ಫ್‌ ಮೆಡಿಕಲ್‌ ಯುನಿವರ್ಸಿಟಿಯು ಒಪ್ಪಂದಗಳನ್ನು ಮಾಡಿಕೊಂಡಿದೆ.

“ಪಶುವೈದ್ಯಕೀಯ ಶಿಕ್ಷಣದ ಪ್ರಾರಂಭವು ಆರೋಗ್ಯ ವೃತ್ತಿಪರರ ಮುಂದಿನ ಪೀಳಿಗೆಯನ್ನು ಸಮಗ್ರವಾಗಿ ತರಬೇತುಗೊಳಿಸುವ ನಮ್ಮ ಧ್ಯೇಯದ ನೈಸರ್ಗಿಕ ವಿಸ್ತರಣೆ. ಒನ್ ಹೆಲ್ತ್ ವಿಧಾನವು ಈಗ ಐಚ್ಛಿಕವಲ್ಲ, ಅದು ಜಾಗತಿಕ ಅವಶ್ಯಕತೆಯಾಗಿದೆ. ಪಶುವೈದ್ಯಕೀಯ ಮತ್ತು ವೈದ್ಯಕೀಯ ಶಿಕ್ಷಣವನ್ನು ಒಂದೇ ಪರಿಸರದಲ್ಲಿ ಸಂಯೋಜಿಸುವ ಮೂಲಕ ಸಂಶೋಧನೆ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ಹೊಸ ಯುಗವನ್ನು ಆರಂಭಿಸುತ್ತಿದ್ದೇವೆ,” ಎಂದು ಗಲ್ಫ್‌ ಮೆಡಿಕಲ್‌ ಯುನಿವರ್ಸಿಟಿಯ ಕುಲಪತಿ ಪ್ರೊ. ಮಂಡಾ ವೆಂಕಟ್ರಮಣ ಹೇಳಿದರು.

ಯುಎಇಯಾದ್ಯಂತ ಹೊಸ ಕ್ಲಿನಿಕ್‌ಗಳು ತೆರೆದಿರುವುದರಿಂದ ಮತ್ತು ತುಂಬೆ ಮೆಡಿಸಿಟಿಯಲ್ಲಿ ಪಶುವೈದ್ಯಕೀಯ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿರುವುದರಿಂದ, ತುಂಬೆ ಗ್ರೂಪ್ ಆರೋಗ್ಯ, ಸಂಶೋಧನೆ ಮತ್ತು ಪಶುಯೋಗಕ್ಷೇಮ ಕ್ಷೇತ್ರಗಳಲ್ಲಿ ದೃಢ ಅಡಿಪಾಯ ಹಾಕುತ್ತಿದೆ.

ಡಾಕ್ಟರ್ ಆಫ್ ವೆಟರ್ನರಿ ಮೆಡಿಸಿನ್ ಪದವಿ ಕಾರ್ಯಕ್ರಮಕ್ಕೆ ಪ್ರವೇಶಕ್ಕಾಗಿ ಆಸಕ್ತ ವಿದ್ಯಾರ್ಥಿಗಳು ತಮ್ಮ ಅರ್ಜಿಗಳನ್ನು www.gmu.ac.ae ಮೂಲಕ ಸಲ್ಲಿಸಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯವನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News