ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆಗೆ ವರ್ಷ ತುಂಬಿದ ಹಿನ್ನೆಲೆ: ಮಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ಪಾದಯಾತ್ರೆ
ಮಂಗಳೂರು : ಬಲಿಷ್ಠ ಭಾರತ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಮನುಷ್ಯರ ನಡುವೆ ಪ್ರೀತಿ, ಸಾಮರಸ್ಯ ರೂಪಿಸುವ ಇರಾದೆಯಿಂದ ದೇಶಾದ್ಯಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡ ಪಾದಯಾತ್ರೆಯು ದೇಶದ ಇತಿಹಾಸದಲ್ಲಿ ಹೊಸ ಬದಲಾವಣೆ ಸೃಷ್ಟಿಸಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಪಟ್ಟರು.
ಐತಿಹಾಸಿಕ ಭಾರತ್ ಜೋಡೋ ಯಾತ್ರೆಯ ಮೊದಲ ವಾರ್ಷಿಕೋತ್ಸವ ಪ್ರಯುಕ್ತ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚ್ ಮುಂಭಾಗದಿಂದ ಪುರಭವನ ಮುಂಭಾಗದ ಗಾಂಧಿ ಪಾರ್ಕ್‌ನವರೆಗೆ ಗುರುವಾರ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಹುಲ್ ಗಾಂಧಿಯ ಭಾರತ್ ಜೋಡೋ ಸಾಗಿ ಬಂದ ರಾಜ್ಯದಲ್ಲೆಲ್ಲಾ ಬದಲಾವಣೆಯ ಗಾಳಿ ಬೀಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿವೆ. ಭಾವೈಕ್ಯತೆ ಹಾಗೂ ಸಾಮರಸ್ಯ ಮೂಡಿವೆ ಎಂದ ರಮಾನಾಥ ರೈ ಮಣಿಪುರದ ಗಲಭೆ ನಮ್ಮ ದೇಹಕ್ಕಾದ ಬಹುದೊಡ್ಡ ಗಾಯ. ಬಿಜೆಪಿಗೆ ಇದನ್ನು ಸರಿಮಾಡಿಲ್ಲ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ದ ಗೆಲುವಿಗೆ ಶ್ರಮಿಸಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ‘ಭಾರತ್ ಜೋಡೋ ಯಾತ್ರೆಯ ಮೂಲಕ ಭಾರತ ಹೊಸ ದಿಕ್ಕಿನತ್ತ ಸಾಗುತ್ತಿವೆ. ದ್ವೇಷದ ರಾಜಕೀಯ ನಡೆಸುತ್ತಿರುವ ಬಿಜೆಪಿಗೆ ಜನರು ತಕ್ಕ ಉತ್ತರ ನೀಡುತ್ತಿದ್ದಾರೆ ಎಂದರು.
ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಕಾಂಗ್ರೆಸ್ ಮುಖಂಡರಾದ ಕಣಚೂರು ಮೋನು, ಇಬ್ರಾಹೀಂ ಕೋಡಿಜಾಲ್, ಮಿಥುನ್ ರೈ, ಇನಾಯತ್ ಅಲಿ, ಸದಾಶಿವ್ ಉಳ್ಳಾಲ್, ಎಂ.ಎಸ್. ಮುಹಮ್ಮದ್, ಎಂ.ಶಶಿಧರ್ ಹೆಗ್ಡೆ, ನವೀನ್ ಡಿಸೋಜ, ಟಿ.ಎಂ ಶಹೀದ್, ಕೆ. ಅಶ್ರಫ್, ಅಬ್ಬಾಸ್ ಅಲಿ, ಸಲೀಂ, ಎಂಜಿ ಹೆಗಡೆ, ಸುಹೈಲ್ ಕಂದಕ್, ಸವಾದ್ ಸುಳ್ಯ, ಪದ್ಮನಾಭ ನರಿಂಗಾನ, ಕೆ. ಅಪ್ಪಿ, ನೀರಜ್ ಚಂದ್ರಪಾಲ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಂಚೂಣಿ ಘಟಕಗಳ ಜಿಲ್ಲಾಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಮಹಿಳಾ-ಯುವ ಕಾಂಗ್ರೆಸ್ ಪದಾಧಿಕಾರಿಗಳು, ಕಾಂಗ್ರೆಸ್ ನಾಯಕರು-ಕಾರ್ಯಕರ್ತರು ಪಾಲ್ಗೊಂಡಿದ್ದರು.