ನಂದಿನಿ ನದಿ ಕಲುಷಿತಗೊಳಿಸಿದ ಆರೋಪ: ವಿವಿಧ ಇಲಾಖೆಗಳ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲು
ಸುರತ್ಕಲ್ : ಇಲ್ಲಿನ ನಂದಿನಿ ನದಿ ಕಲುಷಿತಗೊಳಿಸುತ್ತಿರುವ ಕುರಿತು ಮಂಗಳೂರು ಮಹಾ ನಗರ ಪಾಲಿಕೆ, ಸಣ್ಣ ನೀರಾವರಿ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ದೂರು ನೀಡಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೇಳಾಯರು ಗ್ರಾಮಸ್ಥರಾದ ನಿತಿನ್ ಶೆಟ್ಟಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಮನೆಯ ಹತ್ತಿರದಲಿರುವ ನಂದಿನಿ ನದಿಯು ಸಂಪೂರ್ಣವಾಗಿ ಮಲಿನಗೊಂಡಿದ್ದು, ಕೊಳೆತ ವಾಸನೆ ಬರುತ್ತಿದೆ. ನದಿಗೆ ಸಂಪರ್ಕವಿರುವ ಬಾವಿಯಿಂದ ಚೇಳಾಯರು ಗ್ರಾಮದ ಸುಮಾರು 250ಕ್ಕೂ ಹೆಚ್ಚಿನ ಮನೆಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಇದೇ ನೀರನ್ನು ಕೃಷಿ ಚಟುವಟಿಕೆಗಳಿಗೂ ಉಪಯೋಗಿಸಲಾಗುತ್ತಿದೆ. ಜೊತೆಗೆ ಜಾನುವಾರುಗಳಿಗೆ ಇದೇ ನೀರಿನಿಂದ ಬೆಳೆದ ಮೇವುಗಳನ್ನು ನೀಡಲಾಗುತ್ತಿದೆ.
ನವೆಂಬರ್ ತಿಂಗಳ ನಂತರ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಉಪ್ಪು ನೀರನ್ನು ತಡೆಗಟ್ಟುವ ಸಲುವಾಗಿ 1953ರಲ್ಲಿ ಸಣ್ಣ ನೀರಾವರಿ ಇಲಾಖೆಯವರು ಪಾವಂಜೆ ಬಳಿ ಕಿಂಡಿ ಅಣೆಕಟ್ಟು ನಿರ್ಮಿಸಿದ್ದಾರೆ. ಇದೆಲ್ಲವನ್ನು ತಿಳಿದುಕೊಂಡಿದ್ದರೂ ಮಂಗಳೂರು ಮಹಾನಗರ ಪಾಲಿಕೆಯವರು 2013 ರಿಂದ ಸುರತ್ಕಲ್ ವಲಯದ ಒಳ ಚರಂಡಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡದೆ ಮುಂಚೂರು ರಾಜ ಕಾಲುವೆಯ ಮುಖಾಂತರ ಹಾಗೂ ಕೊಡಿಪಾಡಿ ಮಾಧವನಗರದ ಎಸ್.ಟಿ.ಪಿ ನೀರನ್ನು ನೇರವಾಗಿ ನಂದಿನಿ ನದಿಗೆ ಹರಿಬಿಡುತ್ತಿದ್ದಾರೆ. ಇದರಿಂದ ನಂದಿನಿ ನದಿ ಮಲಿನಗೊಂಡಿದೆ. ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗಿ ಹಲವಾರು ಆರೋಗ್ಯದ ಸಮಸ್ಯೆಗಳು ಬರುತ್ತಿದೆ ಹಾಗೂ ಜಲಚರಗಳು ಸಾಯುತ್ತಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಈ ಕುರಿತು ಸಂಬಂಧ ಪಟ್ಟ ಹಲವು ಇಲಾಖೆಗಳಿಗೆ ಪತ್ರದ ಮುಖೇನ ದೂರು ನೀಡಿದ್ದರೂ, ಯಾವುದೇ ಸ್ವಚ್ಚಗೊಳಿಸುವ ಕೆಲಸಗಳು ನಡೆಸಿಲ್ಲ. ಹಾಗಾಗಿ ಇದಕ್ಕೆ ಸಂಬಂಧಪಟ್ಟ ಮಂಗಳೂರು ಮಹಾ ನಗರ ಪಾಲಿಕೆ, ಸಣ್ಣ ನೀರಾವರಿ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಸುರತ್ಕಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.