ಅಪಘಾತದಲ್ಲಿ ಬೈಕ್ ಸಹ ಸವಾರೆ ಮೃತ್ಯು ಪ್ರಕರಣ: ಆರೋಪಿಗೆ ಶಿಕ್ಷೆ
ಮಂಗಳೂರು: ರಸ್ತೆ ಅಪಘಾತದಲ್ಲಿ ಬೈಕ್‌ನ ಸಹ ಸವಾರೆ ರಿಯಾ ಅಂಟನಿ (19) ಎಂಬಾಕೆಯ ಸಾವಿಗೆ ಕಾರಣನಾದ ಆರೋಪಿ ಕಾರಿನ ಚಾಲಕ ದೀಪಕ್ ಆರ್.ಎಂಬಾತನಿಗೆ ಮಂಗಳೂರು ಜಿಲ್ಲಾ ನ್ಯಾಯಾಲಯ ಆರು ತಿಂಗಳು ಜೈಲು ಶಿಕ್ಷೆ ಮತ್ತು 7 ಸಾವಿರ ರು. ದಂಡ ವಿಧಿಸಿದೆ.
2022ರ ಸೆ.3ರಂದು ಮಣ್ಣಗುಡ್ಡ ಸಮೀಪದ ಗಾಂಧಿನಗರ ಬಳಿ ರಸ್ತೆ ಅಪಘಾತ ಸಂಭವಿಸಿತ್ತು. ಬೈಕ್ ಸವಾರ ಆಕಾಶ್ ಅಜಯ್ ಗಾಯಗೊಂಡಿದ್ದರೆ ಹಿಂಬದಿ ಕುಳಿತಿದ್ದ ರಿಯಾ ಅಂಟನಿ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಈ ಬಗ್ಗೆ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಎಸ್ಸೈ ಜಗನ್ನಾಥ್ ತನಿಖೆ ನಡೆಸಿದ್ದು, ಇನ್‌ಸ್ಪೆಕ್ಟರ್ ಜಯಾನಂದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಾದ-ಪ್ರತಿವಾದ ಆಲಿಸಿದ ಜೆಎಂಎಫ್‌ಸಿ 8ನೇ ನ್ಯಾಯಾಲಯದ ನ್ಯಾಯಾಧೀಶ ಫವಾಝ್ ಪಿ.ಎ. ಆರೋಪಿಗೆ ಶಿಕ್ಷೆ ವಿಧಿಸಿ ಆದೇಶಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಗೀತಾ ರೈ ಮತ್ತು ಆರೋನ್ ಡಿಸೋಜ ವಿಟ್ಲ ವಾದಿಸಿದ್ದರು.