ಇಂಗ್ಲೆಂಡ್ ಸಂಸತ್ತಿನಲ್ಲಿ ಅನುಮೋದನೆ ನಿರೀಕ್ಷೆ: ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಚಂದ್ರು ಅಯ್ಯರ್
ಭಾರತ-ಯು.ಕೆ. ನಡುವಿನ ಆರ್ಥಿಕ ಮತ್ತು ವಾಣಿಜ್ಯ ಒಪ್ಪಂದ
ಮಂಗಳೂರು: ಭಾರತ ಮತ್ತು ಯು.ಕೆ. ನಡುವಿನ ಸಮಗ್ರ ಅರ್ಥಿಕ ಹಾಗೂ ವಾಣಿಜ್ಯ ಒಪ್ಪಂದ (ಸೀಟಾ)ವು ಶೀಘ್ರ ಇಂಗ್ಲೆಂಡ್‌ನ ಸಂಸತ್ತಿನಲ್ಲಿ ಅನುಮೋದನೆ ಪಡೆಯುವ ನಿರೀಕ್ಷೆ ಇದೆ. ಅದರ ಭಾಗವಾಗಿ ಕರ್ನಾಟಕದ ಉದ್ಯಮ ಗಳಿಗೂ ಇಂಗ್ಲಂಡ್‌ನಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ (ಕೇರಳ-ಕರ್ನಾಟಕ) ಚಂದ್ರು ಅಯ್ಯರ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಒಪ್ಪಂದದ ಭಾಗವಾಗಿ ಎರಡೂ ದೇಶಗಳ ನಡುವೆ ವಾಣಿಜ್ಯ ಹಾಗೂ ವ್ಯಾಪಾರದಲ್ಲಿ ಸಾಕಷ್ಟು ಪ್ರಗತಿ ನಿರೀಕ್ಷಿಸಬಹುದು. ಕರಾವಳಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ, ಅಡಿಕೆ, ಗೋಡಂಬಿ, ಐಸ್‌ಕ್ರೀಂ ಕಂಪನಿಗಳಲ್ಲದೆ ಫಿನ್‌ಟೆಕ್, ಐಟಿಯಂತಹ ಕ್ಷೇತ್ರಗಳಿವೆ, ಇವುಗಳಿಗೆ ಇಂಗ್ಲಂಡ್‌ನಲ್ಲಿ ಅವಕಾಶ ಸಿಗಬಹುದಾಗಿದೆ ಎಂದರು.
*ಶಿಕ್ಷಣ/ಪ್ರವಾಸೋದ್ಯಮ ಅವಕಾಶ: ಇಲ್ಲಿನ ವಿದ್ಯಾರ್ಥಿಗಳಿಗೆ ಇಂಗ್ಲಂಡ್‌ನ ಖ್ಯಾತ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗಕ್ಕೆ ವಿದ್ಯಾರ್ಥಿ ವೀಸಾ ಕಲ್ಪಿಸಲಾಗುತ್ತಿದೆ. ಎರಡು ವರ್ಷದಿಂದ ಯುವ ವೃತ್ತಿಪರರಿಗೆ 3,000 ವೀಸಾ ಗಳನ್ನು ಒದಗಿಸಲಾಗಿದೆ. ಎನ್‌ಐಟಿಕೆ ಸುರತ್ಕಲ್, ನಿಟ್ಟೆ, ಸಹ್ಯಾದ್ರಿಯಂತಹ ಗುಣಮಟ್ಟದ ಶಿಕ್ಷಣ, ಆವಿಷ್ಕಾರಕ್ಕೆ ಉತ್ತೇಜನ ನೀಡುವ ಸಂಸ್ಥೆಗಳ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಮಾಡಲಾಗುವುದು ಎಂದರು.
ಸೀಟಾ ಒಪ್ಪಂದಕ್ಕೆ ಭಾರತದ ಸಂಸತ್ತಿನ ಅನುಮೋದನೆ ಸಿಕ್ಕಿದೆ. ಮುಂದೆ ಇಂಗ್ಲಂಡ್‌ನ ಸಂಸತ್ತು ಅಂತಿಮ ಅನುಮೋದನೆ ನೀಡಿದ ಬಳಿಕ ಉಭಯ ರಾಷ್ಟ್ರಗಳ ವ್ಯಾಪಾರೋದ್ಯಮ ಅವಕಾಶಗಳು ಇನ್ನಷ್ಟು ಪ್ರಗತಿ ಕಾಣಲಿವೆ. ಒಪ್ಪಂದಕ್ಕೆ ಮೊದಲು ಉಭಯ ದೇಶಗಳ ನಡುವಿನ ವ್ಯಾಪಾರ 44 ಬಿಲಿಯನ್ ಡಾಲರ್ ಇದ್ದುದು ಇದೀಗ 47ಕ್ಕೇರಿದೆ. ಈ ವಾಣಿಜ್ಯ ಒಪ್ಪಂದವು ಎಐ, ಸೆಮಿಕಂಡಕ್ಟರ್ಸ್, ಕ್ರಿಟಿಕಲ್ ಮಿನರಲ್ಸ್, ಕ್ವಾಂಟಂ ಫಿಸಿಕ್ಸ್, ಬಯೋಟೆಕ್ನಾಲಜಿ, ಫ್ಯೂಚರ್ ಟೆಲಿಕಾಂ ಕ್ಷೇತ್ರಗಳಲ್ಲಿ ಸಹಕಾರಿಯಾಗಲಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಇಂಗ್ಲಂಡ್‌ನ ಶೈಕ್ಷಣಿಕ ಸಂಸ್ಥೆಗಳಿಗೆ ಭಾರತದಲ್ಲಿ ಅವಕಾಶ ಸಿಕ್ಕಿದೆ. ಅದರ ಅಂಗವಾಗಿ ಸೌದಾಂಪ್ಟನ್ ವಿವಿಯ ಕ್ಯಾಂಪಸ್ ಹೊಸದಿಲ್ಲಿಗೆ ಬಂದಿದೆ. ಬೆಂಗಳೂರಿನಲ್ಲಿ ಲಿವರ್‌ಪೂಲ್ ವಿವಿ ಕ್ಯಾಂಪಸ್ ಆರಂಭಗೊಂಡಿದೆ. ಮುಂದೆ ಲ್ಯಾಂಕೆಸ್ಟರ್ ವಿವಿ ಕ್ಯಾಂಪಸ್ ಬರಲಿದೆ ಎಂದು ಚಂದ್ರು ಅಯ್ಯರ್ ಹೇಳಿದರು.
ಈಗಾಗಲೇ ರೋಲ್ಸ್ ರಾಯ್ಸ್, ಆರ್ಮ್ ಹೋಲ್ಡಿಂಗ್ಸ್, ನಾಟ್ ವೆಸ್ಟ್ ಕಂಪನಿಗಳು ಬೆಂಗಳೂರಿನಲ್ಲಿ ಕಾರ್ಯಾ ಚರಿಸುತ್ತಿವೆ. ಭವಿಷ್ಯದಲ್ಲಿ ಬಿಯಾಂಡ್ ಬೆಂಗಳೂರು ಯೋಜನೆಯಡಿ ಮಂಗಳೂರಿನಲ್ಲೂ ಇಂತಹ ಸಂಸ್ಥೆಗಳ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಆರಂಭಿಸುವ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದರು.