×
Ad

ಬಿಳಿಯೂರು ಅಣೆಕಟ್ಟಿಗೆ ಗೇಟ್ ಅಳವಡಿಕೆ : ಉಪ್ಪಿನಂಗಡಿ ವ್ಯಾಪ್ತಿವರೆಗೆ ತುಂಬಿದ ಹಿನ್ನೀರು

Update: 2025-12-08 12:35 IST

ಉಪ್ಪಿನಂಗಡಿ : ಇಲ್ಲಿನ ಬಿಳಿಯೂರಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟಿಗೆ ಗೇಟ್ ಅಳವಡಿಸಿ ನೀರು ನಿಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ–ಮಹಾಕಾಳಿ ಸನ್ನಿಧಿಯ ಸಂಗಮ ಪ್ರದೇಶದಲ್ಲಿರುವ ಉದ್ಭವಲಿಂಗ ಜಲಾವೃತಗೊಂಡಿದೆ. ನೀರು ಸಂಗ್ರಹವಾಗುತ್ತಿರುವುದು ಕೃಷಿಕರಿಗೆ ಸಂತಸ ತಂದರೆ, ಲಿಂಗ ಜಲಾವೃತಗೊಂಡಿರುವುದು ಭಕ್ತರಲ್ಲಿ ನಿರಾಶೆ ಮೂಡಿಸಿದೆ.

ಬಿಳಿಯೂರಿನಲ್ಲಿ ಸಂಪರ್ಕ ಸೇತುವೆ ಸಹಿತ ನಿರ್ಮಿತ ಈ ಅಣೆಕಟ್ಟಿಗೆ 4 ಮೀಟರ್ ಎತ್ತರದ ಗೇಟ್ ಅಳವಡಿಸಿದಾಗ, ನೀರು ನೆಕ್ಕಿಲಾಡಿವರೆಗೆ ಮಾತ್ರ ತುಂಬುತ್ತದೆ ಎಂದು ಪ್ರಾರಂಭದಲ್ಲಿ ತಿಳಿಸಲಾಗಿತ್ತು. ಆದರೆ ಯೋಜನೆ ಪೂರ್ಣಗೊಂಡ ನಂತರ ಹಿನ್ನೀರು ಉಪ್ಪಿನಂಗಡಿ ಗ್ರಾಮ ವ್ಯಾಪ್ತಿಯವರೆಗೂ ಹರಡಿದ್ದು, ಪಾರಂಪರಿಕ ಶಿವರಾತ್ರಿ ಮಖೆ ಸೇರಿದಂತೆ ಮೂರೂ ಮಖೆ ಜಾತ್ರೆಗಳಲ್ಲಿ ನಡೆಯುತ್ತಿದ್ದ ಪೂಜಾ ಕ್ರಮ ವ್ಯತ್ಯಯಗೊಂಡಿತ್ತು.

ಆದರೆ, ನದಿಯಲ್ಲಿ ಸಮುದ್ರಮಟ್ಟಕ್ಕಿಂತ 26.4ಮೀಟರ್ ಎತ್ತರದಲ್ಲಿ ನೀರು ಶೇಖರಣೆಯಾಗಿರುವುದರಿಂದ ಅಂತರ್ಜಲ ವೃದ್ಧಿಯಾಗಿ ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿಯೂ ಜಲಸಂಪತ್ತು ಕಾಣಿಸಲಾರಂಭಿಸಿದೆ. ಜೊತೆಗೆ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆಗೂ ಈ ಅಣೆಕಟ್ಟು ಉಪಯುಕ್ತವಾಯಿತು. ಆದರೆ ಉದ್ಭವಲಿಂಗ ಜಲಾವೃತವಾದ ಕಾರಣ ಉಪ್ಪಿನಂಗಡಿ ವ್ಯಾಪಾರಿಕ ವಲಯಕ್ಕೂ ಪರಿಣಾಮ ಬಿದ್ದಿದೆ. ಭಕ್ತರು ಕನಿಷ್ಠ ಮಖೆ ಜಾತ್ರೆಗಳ ಅವಧಿಯಲ್ಲಿ ಗೇಟ್ ಎತ್ತರವನ್ನು 2 ಮೀಟರ್‌ಗಾಗಿಸಿದರೆ ಪೂಜೆ ಮಾಡಲು ಅವಕಾಶ ಸಿಗುತ್ತದೆ ಎಂದು ಬೇಡಿಕೆ ಸಲ್ಲಿಸಿದ್ದರು.

ಆದರೆ, ಅಣೆಕಟ್ಟಿನ ಗೇಟಿನ ಎತ್ತರ ಕಡಿಮೆ ಮಾಡುವುದು ತಾಂತ್ರಿಕವಾಗಿಯೂ ನೀರಿನ ಅಗತ್ಯದ ದೃಷ್ಟಿಯಿಂದ ಸಾಧ್ಯವಿಲ್ಲ, ಕುಡಿಯುವ ನೀರು ಮುಖ್ಯ ಆದ್ಯತೆ ಎಂದು ಶಾಸಕ ಅಶೋಕ್ ಕುಮಾರ್ ರೈ ಸ್ಪಷ್ಟಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News