ಫೆ.4ರಿಂದ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ, ನೇಮೋತ್ಸವ
ಸುರತ್ಕಲ್: ಮುಲ್ಕಿ ತಾಲೂಕಿನ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಶ್ರೀ ಉಳ್ಳಾಯ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಸಮಾರಂಭ 2026 ನೇ ಫೆ.4 ರಿಂದ10ರ ವರೆಗೆ ನಡೆಯಲಿದೆ ಎಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಸಿ.ಬಿ.ಕರ್ಕೇರ ಅವರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಇದು ಇತಿಹಾಸ ಪುರುಷರಾದ ಕಾಂತಾಬಾರೆ ಬೂದಾಬಾರೆಯರು ರಾತ್ರಿ ಬೆಳಗಾಗುವುದರೊಳಗೆ ಕೈಯಾರೆ ನಿರ್ಮಿ ಸಿದ ಈ ಕ್ಷೇತ್ರವಾಗಿದೆ. ಸುಮಾರು 3.5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಇಲ್ಲಿನ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಎಲ್ಲಾ ಕಾಮಗಾರಿಗಳೂ ಬಹುತೇಕ ಪೂರ್ಣಗೊಂಡಿದೆ. ಬಾರೆಯರು ಬರಿಗೈಯಲ್ಲಿ ತೋಡಿದ್ದರೆಂದು ಪ್ರತೀತಿ ಹೊಂದಿದ್ದ ಬಾವಿಯ ನವೀಕರಣ, ಅಂಗಣಕ್ಕೆ ಇಂಟರ್‌ಲಾಕ್ ವ್ಯವಸ್ಥೆ, ಆವರಣಗೋಡೆ, ಪಡುದಿಕ್ಕಿನಲ್ಲಿ ನೂತನ ಪ್ರವೇಶದ್ವಾರ ನಿರ್ಮಾಣದ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು.
ಫೆ.4 ರಿಂದ ಋತ್ವಿಜರ ಉಪಸ್ಥಿತಿಯಲ್ಲಿ ಸರ್ವ ವೈದಿಕ ವಿಧಿವಿಧಾನಗಳು, ನಿತ್ಯ ಭಜನೆ, ಅನ್ನಸಂತರ್ಪಣೆ, ಸಂಜೆ ಗಣ್ಯರ, ದಾನಿಗಳ ಸಮ್ಮುಖದಲ್ಲಿ ಸಭಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳು ನಾಟಕ, ನೃತ್ಯ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಫೆ.8 ರಂದು ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಫೆ.9 ರಂದು ನೇಮೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದರು.
ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದ್ದು ಪ್ರತಿ ಸಮಿತಿಗಳು ಅತ್ಯಂತ ಸಕ್ರಿಯವಾಗಿ ಸಿದ್ಧತೆಗಳನ್ನು ಮಾಡುತ್ತಿದ್ದು ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪರಮಾನಂದ ಸಾಲ್ಯಾನ್, ಕೋಶಾಧಿಕಾರಿ ಶ್ರೀಧರ ವಿ. ಸುವರ್ಣ, ಆಡಳಿತ ಸಮಿತಿ ಅಧ್ಯಕ್ಷ ಜಗನ್ನಾಥ ಆರ್. ಕೋಟ್ಯಾನ್, ಉಲಾಧ್ಯಕ್ಷ ಅನಿಲ್ ಪೂಜಾರಿ, ಮುಂಬೈ ಸಮಿತಿ ಅಧ್ಯಕ್ಷ ಸತೀಶ್ ಎಸ್. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ದಿನೇಶ್ ಸಿ. ಸಾಲ್ಯಾನ್, ಸಂಚಾಲಕ ಪದ್ಮನಾಭ ಸಸಿಹಿತ್ಲು, ಮಾಧ್ಯಮ ಸಂಚಾಲಕ ಯಶೋಧರ ಕೋಟ್ಯಾನ್, ಪ್ರಮೋದ್ ಕೋಟ್ಯಾನ್ , ಜಗದೀಸ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.