×
Ad

ಸೂರಿಕುಮೇರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರಾಸಿಂಗ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

Update: 2026-01-17 14:17 IST

ಮಾಣಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸೂರಿಕುಮೇರು ಜಂಕ್ಷನ್ ಸಮೀಪ ಸೂಕ್ತ ರಸ್ತೆ ವಿಭಜಕ (ಕ್ರಾಸಿಂಗ್) ಒದಗಿಸುವಂತೆ ಆಗ್ರಹಿಸಿ ಸಾರ್ವಜನಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಬರಿಮಾರು ಮಹಮ್ಮಾಯಿ ದೇವಸ್ಥಾನ, ಸೂರಿಕುಮೇರು ಬದ್ರಿಯಾ ಜುಮಾ ಮಸೀದಿ ಹಾಗೂ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್‌ಗೆ ಸಂಪರ್ಕ ಕಲ್ಪಿಸುವ ಮುಖ್ಯ ಮಾರ್ಗವಾಗಿರುವ ಈ ಪ್ರದೇಶದಲ್ಲಿ ಕ್ರಾಸಿಂಗ್ ಇಲ್ಲದ ಕಾರಣ, ಬರಿಮಾರು–ಸರಪಾಡಿ, ಸೂರಿಕುಮೇರು–ಕೋರ್ಯ ಸೇರಿದಂತೆ ಹಲವು ಒಳರಸ್ತೆಗಳ ಸಂಪರ್ಕ ಕಷ್ಟಕರವಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು, ವಿದ್ಯಾರ್ಥಿಗಳು ಹಾಗೂ ವಾಹನ ಚಾಲಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಕ್ರಾಸಿಂಗ್ ಇಲ್ಲದ ಹಿನ್ನೆಲೆಯಲ್ಲಿ ಒಂದೆರಡು ಕಿಲೋಮೀಟರ್ ಸುತ್ತಿ ಹೋಗಿ ರಸ್ತೆ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಳೀರದಿಂದ ಸೂರಿಕುಮೇರುವರೆಗೆ ಸೂಕ್ತ ಸ್ಥಳದಲ್ಲಿ ಕ್ರಾಸಿಂಗ್ ಒದಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಮಸ್ಯೆಯನ್ನು ಒಂದು ತಿಂಗಳೊಳಗೆ ಪರಿಹರಿಸದಿದ್ದಲ್ಲಿ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಸದಸ್ಯರಾದ ಬಾಲಕೃಷ್ಣ ಆಳ್ವ, ಮೆಲ್ವಿನ್ ಕಿಶೋರ್ ಮಾರ್ಟಿಸ್ ಸೇರಿದಂತೆ ಪ್ರಮುಖರಾದ ಹಸೈನಾರ್ ಸಂಕ, ಕೃಷ್ಣಪ್ಪ, ವಸಂತ, ರೋನಿ ಬೋನಿಸ್, ಸತೀಶ್ ಪ್ರಭು, ಲಕ್ಷ್ಮೀನಾರಾಯಣ, ಹನೀಫ್ ಸಂಕ, ಮುಜೀಬ್ ಮತ್ತಿತರರು ಹಾಗೂ ನೂರಾರು ಸ್ಥಳೀಯ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಮುಖಂಡರು ಹಾಗೂ ನಾಗರಿಕರು ಭಾಗವಹಿಸಿದ್ದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಕಾಮಗಾರಿ ಇಲಾಖೆಯ ಇಂಜಿನಿಯರ್‌ಗಳಾದ ಬಿನೋದ್ ಮತ್ತು ಚಿದಾನಂದ ಅವರು ಮನವಿ ಸ್ವೀಕರಿಸಿ, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News