ʼಗೋಹತ್ಯೆ ಕಾಯ್ದೆʼ ಬಗ್ಗೆ ಮಸೀದಿಗಳಲ್ಲಿ ಜಾಗೃತಿ ಕಾರ್ಯಕ್ರಮ ಅಸಂವಿಧಾನಿಕ; ಪೊಲೀಸರ ವಿರುದ್ಧ ಕಾನೂನು ಕ್ರಮಕ್ಕೆ ಐಜಿಪಿಗೆ ದೂರು
"ಕಾಯ್ದೆಯೊಂದನ್ನು ಮುಸ್ಲಿಂ ಸಮುದಾಯಕ್ಕೆ ಸೀಮಿತಗೊಳಿಸಿ ಅವಮಾನಿಸುವ ಹುನ್ನಾರ"
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಅಕ್ರಮ ದನ ಸಾಗಾಟ ಮತ್ತು ದನ ಹತ್ಯೆಯ ಕುರಿತು ಮಸೀದಿಗಳಿಗೆ ಭೇಟಿ ನೀಡಿ ʼಕರ್ನಾಟಕ ಗೋವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆ' ಜಾಗೃತಿ ಎಂಬ ಕಾರ್ಯಕ್ರಮದ ಮೂಲಕ ಅಸಂವಿಧಾನಿಕ, ತಾರತಮ್ಯದ ಕೃತ್ಯವನ್ನು ಎಸಗುತ್ತಿದ್ದು, ಈ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಪಶ್ಚಿಮ ವಲಯ ಐಜಿಪಿಗೆ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರು ದೂರು ನೀಡಿದ್ದಾರೆ.
ಧರ್ಮಸ್ಥಳ ಪೊಲೀಸರು ಕೊಕ್ಕಡ ಮಸೀದಿಗೆ ಭೇಟಿ ನೀಡಿ ಜನಜಾಗೃತಿ ಹೆಸರಿನಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಸುಳ್ಯ ವ್ಯಾಪ್ತಿಯ ಸುಳ್ಯ ಕೇಂದ್ರ ಜುಮ್ಮಾ ಮಸೀದಿ, ಮೊಗರ್ಪಣೆ ಜುಮಾ ಮಸೀದಿ, ದುಗಲಡ್ಕ ಮಸೀದಿ, ಸುಣ್ಣಮೂಲೆ, ಕುಂಭಕ್ಕೋಡು, ಅರಂತೋಡು ಮಸೀದಿಗಳಲ್ಲಿ ಪ್ರಾರ್ಥನೆಗೆ ಬಂದ ಜನರನ್ನು ನಿಲ್ಲಿಸಿ 'ಕರ್ನಾಟಕ ಗೋ ವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆ'ಯನ್ನು ವಿವರಿಸಿದ್ದಾರೆ. ಕಾಯ್ದೆ ಉಲ್ಲಂಘಿಸಿದವರ ಮನೆಗಳನ್ನು ಜಪ್ತಿ ಮಾಡಲಾಗುವುದು ಎಂದು ಪೋಲೀಸರು ಮಸೀದಿಯಲ್ಲಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ದೂರಿನಲ್ಲಿರುವುದೇನು?:
ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಅಕ್ರಮ ದನ ಸಾಗಾಟ ಮತ್ತು ದನ ಹತ್ಯೆಯ ಕುರಿತು ಮಸೀದಿಗಳಿಗೆ ಭೇಟಿ ನೀಡಿ ʼಕರ್ನಾಟಕ ಗೋವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆ' ಜಾಗೃತಿ ಎಂಬ ಕಾರ್ಯಕ್ರಮದ ಅಸಂವಿಧಾನಿಕ, ತಾರತಮ್ಯದ ಕೃತ್ಯವನ್ನು ಎಸಗುತ್ತಿದ್ದಾರೆ. ಕಾಯ್ದೆಯೊಂದನ್ನು ಮುಸ್ಲಿಂ ಸಮುದಾಯಕ್ಕೆ ಸೀಮಿತಗೊಳಿಸಿ ಸಮುದಾಯವನ್ನು ಅವಮಾನಿಸುವ, ಧಾರ್ಮಿಕ ಕೇಂದ್ರವನ್ನು ಕ್ರಿಮಿನಲೈಸ್ ಮಾಡುವ ಹುನ್ನಾರವಾಗಿದೆ.
ಧರ್ಮಸ್ಥಳ ಪೊಲೀಸರು ಕೊಕ್ಕಡ ಮಸೀದಿಗೆ ಭೇಟಿ ನೀಡಿ ಜನಜಾಗೃತಿ ಹೆಸರಿನಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಸುಳ್ಯ ವ್ಯಾಪ್ತಿಯ ಸುಳ್ಯ ಕೇಂದ್ರ ಜುಮ್ಮಾ ಮಸೀದಿ, ಮೊಗರ್ಪಣೆ ಜುಮಾ ಮಸೀದಿ, ದುಗಲಡ್ಕ ಮಸೀದಿ, ಸುಣ್ಣಮೂಲೆ, ಕುಂಭಕ್ಕೋಡು, ಅರಂತೋಡು ಮಸೀದಿಗಳಲ್ಲಿ ಪ್ರಾರ್ಥನೆಗೆ ಬಂದ ಜನರನ್ನು ನಿಲ್ಲಿಸಿ 'ಕರ್ನಾಟಕ ಗೋ ವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆ'ಯನ್ನು ವಿವರಿಸಿದ್ದಾರೆ. ಕಾಯ್ದೆ ಉಲ್ಲಂಘಿಸಿದವರ ಮನೆಗಳನ್ನು ಜಪ್ತಿ ಮಾಡಲಾಗುವುದು ಎಂದು ಪೋಲೀಸರು ಮಸೀದಿಯಲ್ಲಿ ಬೆದರಿಸಿದ್ದಾರೆ. ಇದು ಕರ್ನಾಟಕ ಗೋ ವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆಯನ್ನು ಮುಸ್ಲಿಮರು ಮಾತ್ರ ಉಲ್ಲಂಘಿಸುತ್ತಾರೆ ಎಂಬ ಸಂದೇಶ ನೀಡುತ್ತದೆ. ಕಾಯ್ದೆಯೊಂದನ್ನು ಒಂದು ಸಮುದಾಯದವರು ಮಾತ್ರ ಉಲ್ಲಂಘಿಸುತ್ತಾರೆ ಎಂದು ಹೇಳುವುದು 'ಸಮುದಾಯವನ್ನು ಕ್ರಿಮಿನಲೈಸ್' ಮಾಡುವ ಕೃತ್ಯವಾಗುತ್ತದೆ. ಬ್ರಿಟೀಷರು ಆದಿವಾಸಿ, ಅಲೆಮಾರಿ ಸಮುದಾಯವನ್ನು 'ಕ್ರಿಮಿನಲ್ ಟ್ರೈಬ್ಸ್' ಎಂದು ಘೋಷಿಸಿದಂತೆ ದಕ್ಷಿಣ ಕನ್ನಡ ಪೊಲೀಸರು ಮುಸ್ಲಿಂ ಸಮುದಾಯವನ್ನು 'ಕ್ರಿಮಿನಲ್ ಕಮ್ಯೂನಿಟಿ' ಎಂದು ಘೋಷಿಸಿದೆಯೇ ?
2020 ಡಿಸೆಂಬರ್ 13 ರಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದ ಪೊಲೀಸ್ ಠಾಣೆಯಲ್ಲಿ ದಾಖಲಾದ ದನಕಳ್ಳತನದ ಎಫ್ಐಆರ್ ನಲ್ಲಿ ಅನಿಲ್ ಪ್ರಭು ಹೆಸರಿದೆ. 2021 ರ ನವೆಂಬರ್ 08 ರಂದು ಮೂಡಬಿದ್ರೆಯಲ್ಲಿ ದನವನ್ನು ಕದ್ದು ಮಾಂಸಕ್ಕಾಗಿ ಮಾರಾಟ ಮಾಡುತ್ತಿದ್ದ ಸಂಬಂಧ ದಾಖಲಾಗಿರುವ ಎಫ್ಐಆರ್ ನಲ್ಲಿ ವಾಲ್ಪಾಡಿ ಗ್ರಾಮದ ಪವನ್ ಕುಮಾರ್, ಮಾರೂರಿನ ಸತೀಶ್ ಮತ್ತು ಜಯಾನಂದ ಹೆಸರಿದೆ. 2021 ಸೆಪ್ಟೆಂಬರ್ 17 ರಂದು ಮೂಡಬಿದ್ರೆಯಲ್ಲಿ ದಾಖಲಾದ ದನಕಳ್ಳತನದ ಎಫ್ಐಆರ್ ನಲ್ಲಿ ಹರೀಶ್ಚಂದ್ರ ಆಚಾರ್ಯ ಮತ್ತು ಕರಿಯ ಎಂಬವರ ಹೆಸರುಗಳಿವೆ. ಬೆಳ್ತಂಗಡಿಯ ಸೋಣಂದೂರು ಶಾಲಾ ಬಳಿ ಪೊಲೀಸರು ಟೆಂಪೋವೊಂದನ್ನು ನಿಲ್ಲಿಸಿ ಪರಿಶೀಲನೆ ಮಾಡಿದಾಗ ಅದರಲ್ಲಿ ಎರಡು ಹೋರಿಗಳು ಮತ್ತು ಕರುಗಳು ಪತ್ತೆಯಾದವು. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಪಣಕಜೆ ಸಬರಬೈಲು ನಿವಾಸಿ ಗಣೇಶ್ ಎಂಬುದು ಬಯಲಾಯಿತು. ಇದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2021 ಸೆಪ್ಟೆಂಬರ್ 23 ರಂದು ನೆಲ್ಯಾಡಿ ರಸ್ತೆಯಲ್ಲಿ ದನ ಸಾಗಾಟ ಪತ್ತೆಯಾಗಿದ್ದು, ಉಪ್ಪಿನಂಗಡಿ ಪೊಲೀಸರು ಗುರುಪ್ರಸಾದನ ವಿರುದ್ಧ ಆ.ಕ್ರ.96/2021 ಕಲಂ 11(ಡಿ) ಕಲಂ 66(1) 192 ಎ ಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. 2020 ಸೆಪ್ಟೆಂಬರ್ 04 ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ದನಕಳ್ಳತನದ ಎಫ್ಐಆರ್ ನಲ್ಲಿ ಕಾಸರಗೋಡು ಪಾಲಾರ್ ಬಂದಡ್ಕ ನಿವಾಸಿಗಳಾದ ಶಿವಪ್ರಸಾದ್ ಭಟ್ ಕೆ (52) ಮತ್ತು ಚಂದ್ರನ್ ಟಿ (34) ಎಂಬವರ ಹೆಸರುಗಳಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಟ್ಲದ ಇಡ್ಕಿದು ಗ್ರಾಮದಲ್ಲಿ ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದ ಮಿತ್ತೂರು ಬರ್ಕೋಡಿ ನಿವಾಸಿ ಪದ್ಮನಾಭ ಗೌಡ ಎಂದು ಗುರುತಿಸಲಾಯಿತು. ಪದ್ಮನಾಭಗೌಡ ವಿರುದ್ದ ಪೊಲೀಸರು 2020 ರ ಜುಲೈ 30 ರಂದು ಕೇಸು ದಾಖಲಿಸಿಕೊಂಡಿದ್ದಾರೆ. 2020 ಜುಲೈ 20 ರಂದು ಬೆಳ್ತಂಗಡಿಯ ಸುರ್ಯ ಎಂಬಲ್ಲಿನ ಮನೆಯ ಕೊಟ್ಟಿಗೆಯಿಂದ ದನವನ್ನು ಕಳ್ಳತನ ಮಾಡಿದ ಆರೋಪಿ ರಾಜೇಶ್ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 2021 ನವೆಂಬರ್ 24 ರಂದು ಬೆಳ್ತಂಗಡಿಯಲ್ಲಿ ಅಕ್ರಮ ಗೋಸಾಗಾಟ ಮಾಡುತ್ತಿದ್ದ ಆರೋಪಿಗಳಾದ ಬಸವರಾಜ್, ಅವಿನಾಶ್ ಬಿ ಆರ್, ಪುಷ್ಪರಾಜ್ ಜಿ.ಎಸ್ ಹರೀಶ್ , ಬಿ.ಎಸ್ ಹರೀಶ್, ಶೀನ ಪುಜಾರಿ ವಿರುದ್ದ ತನಿಖೆ ನಡೆಸಿದ ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 2021 ಡಿಸೆಂಬರ್ 15 ರಂದು ಬೆಳ್ತಂಗಡಿಯ ಪೊಲೀಸರು ದನವನ್ನು ಸಾಗಾಟ ಮಾಡುತ್ತಿದ್ದ ಬೆಳ್ತಂಗಡಿಯ ಗರ್ಡಾಡಿ ಗ್ರಾಮದ ಶೇಖರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. 2021 ಫೆಬ್ರವರಿ 12 ರಂದು ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಗೋಹತ್ಯೆ ನಿಷೇಧ ಕಾಯ್ದೆ 2020ರನ್ವಯ ಎಫ್ಐಆರ್ ನಲ್ಲಿ ಮೈಸೂರಿನ ರಾಘವೇಂದ್ರ ಎಂಬಾತನ ಹೆಸರಿದೆ. ಈ ಎಲ್ಲಾ ಕೃತ್ಯಗಳ ಹಿನ್ನಲೆಯಲ್ಲಿ ಸ್ಥಳೀಯ ಪೊಲೀಸರು ಸಂಬಂಧಪಟ್ಟ ಊರಿನ ಧಾರ್ಮಿಕ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮ ಮಾಡಿದ್ದಾರೆಯೇ ? ಈ ಎಫ್ಐಆರ್ ಗಳ ಆಧಾರದಲ್ಲಿ ಸಂಬಂಧಪಟ್ಟ ಪ್ರಾರ್ಥನಾಲಯಗಳಲ್ಲಿ "ಆಸ್ತಿ ಸೀಝ್" ಎಚ್ಚರಿಕೆ ನೀಡಿದ್ದಾರೆಯೇ ? ಈ ಎಲ್ಲಾ ಪ್ರಕರಣಗಳಲ್ಲಿ ಇಲ್ಲದೇ ಇರುವ ಪ್ರೊಸಿಜರ್ ಅನ್ನು ಮುಸ್ಲಿಂ ಧಾರ್ಮಿಕ ಕೇಂದ್ರದಲ್ಲಿ ಮಾಡಲು ಕಾರಣವೇನು ? ಧರ್ಮಸ್ಥಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 72/2025 ಗೂ ಕೊಕ್ಕಡ ಮಸೀದಿಗೂ ಏನು ಸಂಬಂಧ ? ಇದು ಕೇವಲ ಮಸೀದಿ ಮತ್ತು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುವುದು ಮುಸ್ಲಿಂ ಸಮುದಾಯವನ್ನು ಕ್ರಿಮಿನಲ್ ಸಮುದಾಯ ಎಂದು ಘೋಷಿಸುವ ಹುನ್ನಾರದಂತೆ ಕಾಣಿಸುವುದಿಲ್ಲವೆ ?
ಭಾರತದ ಸಂವಿಧಾನದ 25 ಮತ್ತು 26 ನೇ ವಿಧಿಗಳು ಧಾರ್ಮಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಧಾರ್ಮಿಕ ವಿಷಯಗಳಲ್ಲಿ ತಮ್ಮದೇ ಆದ ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಸ್ವಾಯತ್ತತೆಯನ್ನು ಖಾತರಿಪಡಿಸುತ್ತವೆ. ಪೊಲೀಸರು ಸೇರಿದಂತೆ ಯಾವುದೇ ರಾಜ್ಯ ಪ್ರಾಧಿಕಾರವು ಪೂಜಾ ಸ್ಥಳಕ್ಕೆ ತೊಂದರೆ ಉಂಟುಮಾಡುವ ಅಥವಾ ಕಳಂಕ ತರುವ ರೀತಿಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಧಾರ್ಮಿಕ ಸ್ಥಳದೊಳಗೆ, ವಿಶೇಷವಾಗಿ ಗೋಹತ್ಯೆಯಂತಹ ಸೂಕ್ಷ್ಮ ವಿಷಯಗಳ ಮೇಲೆ, ಅಪರಾಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದು ಸಂವಿಧಾನ ಘೋಷಿಸಿರುವ 'ರಾಜ್ಯದ ತಟಸ್ಥತೆ'ಯನ್ನು ಉಲ್ಲಂಘಿಸುತ್ತದೆ.
ಕರ್ನಾಟಕ ಪೊಲೀಸ್ ಕಾಯ್ದೆ, 1963 ರಂತೆ ಪೊಲೀಸ್ ಕರ್ತವ್ಯಗಳನ್ನು ಕಾನೂನುಬದ್ಧ ಅಧಿಕಾರದ ಅಡಿಯಲ್ಲಿ ಮತ್ತು ನಿಗದಿತ ಮಿತಿಯೊಳಗೆ ನಿರ್ವಹಿಸಬೇಕು. ಪೊಲೀಸರು ಸಕ್ಷಮ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸಲು ಬದ್ಧರಾಗಿರುತ್ತಾರೆಯೇ ಹೊರತು ನಿರಂಕುಶವಾಗಿ ಅಲ್ಲ . ಧಾರ್ಮಿಕ ನೆಲೆಯಲ್ಲಿ ಕಾಯ್ದೆಯೊಂದರ ಕುರಿತು ಅನಧಿಕೃತ ಜಾಗೃತಿ ಅಭಿಯಾನವನ್ನು ನಡೆಸುವುದು, ಕಾಯ್ದೆಯನ್ನು ಒಂದು ಸಮುದಾಯಕ್ಕೆ ಮಾತ್ರ ಮೀಸಲು ಮಾಡಿ ಆರೋಪಿಸುವುದು ಅಧಿಕಾರದ ದುರುಪಯೋಗ ಮತ್ತು ಕಾನೂನಿನ ಉಲ್ಲಂಘನೆಯಾಗಿದೆ.
ಪೊಲೀಸ್ ಸಿಬ್ಬಂದಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದಾದರೆ ಅದು ಪ್ರಾರ್ಥನಾ ಸ್ಥಳದಲ್ಲಿ ಮಾಡುವಂತಿಲ್ಲ. ಅದನ್ನು ಎಲ್ಲಾ ಜಾತಿ, ಸಮುದಾಯ, ಮಹಿಳೆ, ಪುರುಷರು ಸೇರಬಹುದಾದ ತಟಸ್ಥ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಬೇಕು. ಹಾಗಾಗಿ ಕೊಕ್ಕಡ ಮಸೀದಿ, ಸುಳ್ಯ ಕೇಂದ್ರ ಜುಮ್ಮಾ ಮಸೀದಿ, ಮೊಗರ್ಪಣೆ ಜುಮಾ ಮಸೀದಿ, ದುಗಲಡ್ಕ ಮಸೀದಿ, ಸುಣ್ಣಮೂಲೆ, ಕುಂಭಕ್ಕೋಡು, ಅರಂತೋಡು ಮಸೀದಿ ಗಳಲ್ಲಿ ಪೊಲೀಸ್ ಸಿಬ್ಬಂಧಿ ಕಾಯ್ಧೆಯ ಬಗ್ಗೆ ಎಚ್ಚರಿಕೆ/ಜಾಗೃತಿ ನೀಡಿರುವುದು ಅಪರಾಧ. ಹಾಗಾಗಿ, ಸದ್ರಿ ಪೊಲೀಸ್ ಸಿಬ್ಬಂದಿ ಮತ್ತು ಅ ಸಿಬ್ಬಂದಿಯನ್ನು ನಿರ್ದೇಶಿಸಿದ ಅಧಿಕಾರಿಯ ವಿರುದ್ದ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.