×
Ad

ಮೂಡುಬಿದಿರೆ: ‘ಅಲೋಕ 2026’ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ: ಡಾ.ಮೋಹನ ಆಳ್ವರಿಗೆ ಗೌರವ

Update: 2026-03-06 21:08 IST

ಮೂಡುಬಿದಿರೆ: ಆಯುರ್ವೇದ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಕೇವಲ ಪುಸ್ತಕಗಳಿಗೆ ಸೀಮಿತವಾಗದೆ ಸಮಾಜಕ್ಕೆ ಉಪಯೋಗವಾಗುವ ಹಾಗೆಯೂ ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಡುವಂತೆಯೂ ರೂಪುಗೊಳ್ಳ ಬೇಕು ಎಂದು ಮೈಸೂರಿನ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀ ನಾರಾಯಣ ಶೆಣೈ ಅಭಿಪ್ರಾಯಪಟ್ಟರು.

ಅವರು ಆಳ್ವಾಸ್ ಆಯುರ್ವೇದ ಕಾಲೇಜಿನ ಆತ್ಮ ಸಂಶೋಧನಾ ಕೇಂದ್ರ ಹಾಗೂ ಮೈಸೂರಿನ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾದ ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ‘ಅಲೋಕ 2026’ ಅನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಎಂ. ಮೋಹನ ಆಳ್ವ, ಆಯುರ್ವೇದ ಕ್ಷೇತ್ರದಲ್ಲಿ ನಡೆಯುತ್ತಿ ರುವ ಸಂಶೋಧನೆಗಳನ್ನು ದಾಖಲೆಗಳ ಮೂಲಕ ವಿಶ್ವಕ್ಕೆ ಪರಿಚಯಿಸುವುದರ ಜೊತೆಗೆ ಅವುಗಳನ್ನು ವ್ಯಾಪಾರ ಕ್ಷೇತ್ರಕ್ಕೂ ತಲುಪಿಸುವುದು ಅಗತ್ಯವಿದೆ ಎಂದು ಹೇಳಿದರು. ಕೇಂದ್ರ ಸರ್ಕಾರವು ಈ ವರ್ಷದ ಬಜೆಟ್‌ನಲ್ಲಿ ಆಯುರ್ವೇದ ಕ್ಷೇತ್ರಕ್ಕೆ 4000 ಕೋಟಿಗೂ ಅಧಿಕ ಅನುದಾನ ಘೋಷಿಸಿರುವುದು ಆಯುರ್ವೇದದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮೈಸೂರಿನ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ವತಿಯಿಂದ ಡಾ. ಎಂ. ಮೋಹನ ಆಳ್ವರನ್ನು ಗೌರವಿಸಲಾಯಿತು. ನಂತರ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ವಿವಿಧ ಅಧಿವೇಶನಗಳನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಸುಶೀಲ ಶೆಟ್ಟಿ, ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನ ಮುಖ್ಯಸ್ಥ ಪ್ರೊ. ಶ್ರೀನಾಥ್ ರಾಮಮೂರ್ತಿ, ಆತ್ಮ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಸುಬ್ರಹ್ಮಣ್ಯ ಪದ್ಮನಾಭ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ಮಂಜುನಾಥ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಡಾ. ಗೀತಾ ಮಾರ್ಕಂಡೇಯ ನಿರೂಪಿಸಿ, ಡಾ. ಸುಮಂತ ಶೆಣೈ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News