×
Ad

ಸಮನ್ವಯ ಶಿಕ್ಷಕ ಪ್ರಶಸ್ತಿ- 2023: ಡಾ.ನಿಯಾಝ್ ಪಣಕಜೆ ಆಯ್ಕೆ

Update: 2023-11-05 21:24 IST

ಡಾ. ನಿಯಾಝ್ ಪಣಕಜೆ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯ ಶಿಕ್ಷಕರ ಸಂಘ ವತಿಯಿಂದ ಶೈಕ್ಷಣಿಕ ಮತ್ತು ವೃತ್ತಿಪರ ಸಾಧನೆಗಾಗಿ ಕೊಡ ಮಾಡುವ ಸಮನ್ವಯ ಶಿಕ್ಷಕ ಪ್ರಶಸ್ತಿ - 2023ಕ್ಕೆ ಯೆನಪೋಯ ಕಲಾ, ವಿಜ್ಞಾನ , ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಧ್ಯಾಪಕ ಡಾ. ನಿಯಾಝ್ ಪಣಕಜೆ ಅವರನ್ನು ಆಯ್ಕೆ ಮಾಡಲಾಗಿದೆ.

ನವೆಂಬರ್ 12 ರಂದು ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ನಡೆಯಲಿರುವ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್ ಎಸ್ ತಿಳಿಸಿರುತ್ತಾರೆ.

ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಪಣಕಜೆ ನಿವಾಸಿ ಇಬ್ರಾಹಿಂ ಮತ್ತು ಝುಬೇದಾ ದಂಪತಿಯ ಪುತ್ರನಾದ ಡಾ.‌ನಿಯಾಝ್ ಪಣಕಜೆ ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿ ಡಾಕ್ಟರೇಟ್ ಪದವೀಧರನಾಗಿದ್ದಾರೆ.

ಎಂ.ಬಿ.ಎ‌ ಪದವಿ ಪಡೆದ ಇವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗಳಾದ ಕೆ.ಸೆಟ್ ಮತ್ತು ಎನ್.ಇ.ಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. 

2021 ರಲ್ಲಿ ತನ್ನ "ಗ್ರಾಮೀಣ ಮುಸ್ಲಿಂ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರಿ ಬ್ಯಾಂಕು ಗಳ ಪಾತ್ರ" ಎಂಬ ಅಧ್ಯಯನ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಕೂಲಿ ಕಾರ್ಮಿಕನಾಗಿ, ಆಟೋ ಚಾಲಕನಾಗಿ, ಹಸಿ ಮೀನು ಮಾರಾಟಗಾರನಾಗಿ ದುಡಿಯುತ್ತಾ ವಿದ್ಯೆಯನ್ನು ಕರಗತ ಮಾಡಿಕೊಂಡ ಡಾ. ನಿಯಾಝ್ ಪ್ರಸ್ತುತ ಯೆನಪೋಯ ವಿಶ್ವವಿದ್ಯಾಲಯದ ಅಂಗಸಂಸ್ಥೆಯಲ್ಲಿ ಪ್ರಾದ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News