×
Ad

ದೇವರಾಜ ಅರಸು ಭೂಸುಧಾರಣೆ ಕಾಯ್ದೆ ಜಾರಿಯ ಹರಿಕಾರ: ಜಿಲ್ಲಾಧಿಕಾರಿ ದರ್ಶನ್

Update: 2025-08-20 13:25 IST

ಮಂಗಳೂರು, ಆ.20: ಭೂಸುಧಾರಣಾ ಕಾಯ್ದೆಯನ್ನು ಕರ್ನಾಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಡಿ. ದೇವರಾಜ ಅರಸು ಅವರ ಪಾತ್ರ ಮಹತ್ತರವಾದುದು ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದ್ದಾರೆ.

 

ದ.ಕ. ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಡಿ. ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮೈಸೂರು ಸಂಸ್ಥಾನವಾಗಿದ್ದ ವೇಳೆ ಹಾಗೂ ಕರ್ನಾಟಕ ಆಗಿ ರಾಜ್ಯ ಮರು ನಾಮಕರಣದ ವೇಳೆ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದವರು ಡಿ.ದೇವರಾಜ ಅರಸು. ಅವರನ್ನು ಇಂದಿಗೂ ನೆನಪಿಸಿಕೊಳ್ಳಲು ಕಾರಣ ಅವರು ಮಾಡಿರುವ ಸಮಾಜ ಸುಧಾರಣೆ ಕಾರ್ಯಗಳು ಎಂದವರು ಹೇಳಿದರು.

 

ಉತ್ತರ ಭಾರತದಲ್ಲಿ ಭೂದಾನ, ಗ್ರಾಮ ದಾನದ ಮೂಲಕ ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದರೆ ಕರ್ನಾಟದಲ್ಲಿ ಉಳುವವನೇ ಹೊಲದೊಡೆಯ ಪರಿಕಲ್ಪನೆಯಡಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಯಿತು. ಆ ಸಂದರ್ಭದಲ್ಲಿ ಭೂ ಮಾಲಕರ ವಿರೋಧದ ನಡುವೆಯೂ ಧೈರ್ಯದಿಂದ ಪ್ರೇರಣೆಯೊಂದಿಗೆ, ಜನ ಬೆಂಬಲದೊಂದಿಗೆ ಕಾಯ್ದೆ ಜಾರಿಗೊಳಿಸುವಲ್ಲಿ ದೇವರಾಜ ಅರಸು ಅವರು ಕಾರಣರಾಗಿದ್ದರು. ಆ ಮೂಲಕ ಲಕ್ಷಾಂತರ ಕುಟುಂಬಗಳು ಜಮೀನು ಹೊಂದುವಂತಾಯಿತು. ಇಂದಿನ ಯುವಕರಿಗೆ ನಮ್ಮ ಜಮೀನು ಹೇಗೆ ದೊರಕಿದೆ ಎಂಬ ಬಗ್ಗೆ ಅರಿವು ಇಲ್ಲವಾಗಿದೆ. ತಿಳಿದವರು ಅದನ್ನು ತಿಳಿಸುವ ಕಾರ್ಯ ಮಾಡಬೇಕು ಎಂದು ಅವರು ಹೇಳಿದರು.

ಡಿ. ದೇವರಾಜ ಅರಸುರವರ ತತ್ವ ಮತ್ತು ಚಿಂತನೆಗಳ ಬಗ್ಗೆ ಉಪನ್ಯಾಸ ನೀಡಿದ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್, ಭೂಮಸೂದೆ ಕಾನೂನು ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ದಕ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಲು ಹಿತಾಸಕ್ತಿ ವಹಿಸಿದ್ದು ಡಿ. ದೇವರಾಜ ಅರಸು. ಜೀತ ಪದ್ಧತಿ, ಹಿಂದುಳಿದ ವರ್ಗಗಳ ವಸತಿ ನಿಲಯ, ಜನತಾ ನಿವೇಶನ ಯೋಜನೆಗಳೂ ಅವರ ಕೊಡುಗೆಗಳಾಗಿವೆ ಎಂದು ಹೇಳಿದರು.

 

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ್ ಕರ್ಭಾರಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರನಾಥ ಗಟ್ಟಿ ಕೆ., ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತ ಡಿ.ಎಸ್. ಗಟ್ಟಿ, ಡಿಸಿಪಿ ರವಿಶಂಕರ್, ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರದೀಪ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ ಎನ್. ನಾಯಕ ಸ್ವಾಗತಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News