×
Ad

ಬಜ್ಪೆಯಲ್ಲಿ ವಿಎಚ್‌ಪಿಯಿಂದ ಪೊಲೀಸ್ ಅನುಮತಿ ಇಲ್ಲದೆ ಜನಾಗ್ರಹ ಸಭೆ!

Update: 2025-05-25 22:30 IST

ಮಂಗಳೂರು: ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ಒಪ್ಪಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ರವಿವಾರ ಆಯೋಜಿಸಿದ್ದ ಜನಾಗ್ರಹ ಸಭೆ ಮತ್ತು ಶೃದ್ಧಾಂಜಲಿ ಸಭೆಗೆ ಪೊಲೀಸ್ ಅನುಮತಿ ಪಡೆದುಕೊಳ್ಳಲಾಗಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ ಪರಿಸರದ ಅಂಗಡಿ ಮುಂಗಟ್ಟುಗಳನ್ನು ಪೊಲೀಸರೇ ಬಲವಂತವಾಗಿ ಬಂದ್ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ವರ್ತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜನಾಗ್ರಹ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್, ಸುಹಾಸ್ ಶೆಟ್ಟಿ ಕೊಲೆಯಲ್ಲಿ ಓರ್ವ ಪೊಲೀಸ್‌ ಸಿಬ್ಬಂದಿ ಹಾಗೂ ರಾಜಕಾರಣಿಯೋರ್ವ ಭಾಗಿಯಾಗಿದ್ದಾನೆ. ಇಲಾಖೆಯ ಕೆಲವರು ದೇಶದ್ರೋಹಿಗಳ ಜೊತೆ ಸೇರಿಕೊಂಡಿದ್ದಾರೆ. ದಕ್ಷ ಅಧಿಕಾರಿಗಳಿಗೆ ಕೆಲಸ ಮಾಡಲು ಸರಕಾರ ಬಿಡುತ್ತಿಲ್ಲ. ಪೊಲೀಸ್ ಇಲಾಖೆ ಮತ್ತು ಸರಕಾರದ ಮೇಲೆ ನಮಗೆ ವಿಶ್ವಾಸವಿಲ್ಲ. ಹಾಗಾಗಿ ಪ್ರಕರಣದ ತನಿಖೆಯನ್ನು ಎನ್ ಐಎಗೆ ವಹಿಸಬೇಕೆಂದು ಅವರು ಆಗ್ರಹಿಸಿದರು.

ವಿಎಚ್‌ಪಿ ಮುಖಂಡನಿಂದ ಪ್ರಚೋದನಾಕಾರಿ ಭಾಷಣ:

ಸುಹಾಸ್ ಹತ್ಯೆಯ ದ್ವೇಷ ಇನ್ನೂ‌ ಮಾಸಿಲ್ಲ.‌ ಇದಕ್ಕೆ ಉತ್ತರ ಎಲ್ಲಿ ಯಾವ ಸಮಯದಲ್ಲಿ ಕೊಡಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ. ಉತ್ತರ ಕೊಡುವ ಜಾಗ ಮತ್ತು ಶೈಲಿ ನಿಮ್ಮದೇ ಆಗಿರುತ್ತದೆ ಎಂದು ವಿಶ್ವಹಿಂದೂ ಪರಿಷತ್ ಮುಖಂಡ ಶ್ರೀಕಾಂತ್ ಶೆಟ್ಟಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ.

ಸಭೆಯಲ್ಲಿ ಎಚ್.ಕೆ.ಪುರುಷೋತ್ತಮ, ಶಿವಾನಂದ ಮೆಂಡನ್, ಭುಜಂಗ ಕುಲಾಲ್, ಸುಹಾಸ್ ಶೆಟ್ಟಿಯ ತಂದೆ ಮೋಹನ್ ಶೆಟ್ಟಿ, ತಾಯಿ ಸುಲೋಚನಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News