ಭಾರತ ಸೇರಿದಂತೆ ಜಗತ್ತಿನ ಎಲ್ಲಡೆ ಪ್ರಜಾಪ್ರಭುತ್ವವು ಸಂದಿಗ್ಧ ಸ್ಥಿತಿಯಲ್ಲಿದೆ: ಮಾಜಿ ಮುಖ್ಯ ಚುನಾವಣಾ ಆಯುಕ್ತ ಖುರೈಶಿ
ಮಂಗಳೂರಿನಲ್ಲಿ 29ನೇ ‘ಪ್ರೊಫ್ಕಾನ್ ʼ ಜಾಗತಿಕ ವೃತ್ತಿಪರ ವಿದ್ಯಾರ್ಥಿಗಳ ಸಮ್ಮೇಳನ
ಮಂಗಳೂರು: ಭಾರತ ಸೇರಿದಂತೆ ಜಗತ್ತಿನ ಎಲ್ಲಡೆ ಪ್ರಜಾಪ್ರಭುತ್ವವು ಸಂದಿಗ್ಧ ಸ್ಥಿತಿಯಲ್ಲಿದೆ. ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗಿದೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಡಾ. ಎಸ್.ವೈ. ಖುರೈಶಿ ಕಳವಳ ವ್ಯಕ್ತಪಡಿಸಿದ್ದಾರೆ.
ವಿಸ್ಡಮ್ ಇಸ್ಲಾಮಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ರಾಜ್ಯ ಸಮಿತಿಯು ಮಂಗಳೂರಿನಲ್ಲಿ ನಗರದಲ್ಲಿ ಆಯೋಜಿಸಲಾಗಿರುವ 29 ನೇ ‘ಪ್ರೊಫ್ಕಾನ್ ʼ ಜಾಗತಿಕ ವೃತ್ತಿಪರ ವಿದ್ಯಾರ್ಥಿಗಳ ಮೂರು ದಿನಗಳ ಸಮ್ಮೇಳನದಲ್ಲಿ ಶನಿವಾರ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಳೆದ ಮೂರು ದಶಕಗಳ ಜಗತ್ತಿನ ಆಡಳಿತ ವ್ಯವಸ್ಥೆಯನ್ನು ಗಮನಿಸಿದರೆ ಜನರು ಸರ್ವಾಧಿಕಾರಿ ಆಡಳಿತದಡಿಯಲ್ಲಿ ಜೀವನ ಸಾಗಿಸುತ್ತಿರುವುದನ್ನು ಗಮನಿಸಬಹುದಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರಗಳು ದಣಿದಂತೆ ಕಾಣುತ್ತಿವೆ. ಚುನಾವಣೆಗಳಲ್ಲಿ ಮತದಾರರ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆ ಕ್ಷೀಣಿಸುತ್ತಿದೆ ಎಂದು ಅವರು ಹೇಳಿದರು.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತವು ಇಂತಹ ಕಾಲಘಟ್ಟದಲ್ಲಿ ನಿರ್ಣಾಯಕ ಪಾತ್ರ ಮತ್ತು ಜವಾಬ್ದಾರಿಯನ್ನು ಹೊಂದಿದೆ ಎಂದು ಡಾ. ಖುರೈಷಿ ಭಿಪ್ರಾಯಪಟ್ಟರು.
ದೇಶದಲ್ಲಿನ ಒಕ್ಕೂಟ ವ್ಯವಸ್ಥೆ ಮತ್ತು ರಾಜಕೀಯ ಪಕ್ಷಗಳೊಳಗಿನ ಆಂತರಿಕ ಪ್ರಜಾಪ್ರಭುತ್ವ ದುರ್ಬಲಗೊಂಡಿರುವುದು, ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿರುವುದು , ಸುಳ್ಳು ಸುದ್ದಿಗಳ ಪ್ರಸರಣ ಮತ್ತು ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಧ್ರುವೀಕರಣವು ಪ್ರಜಾಪ್ರಭುತ್ವದ ಮೂಲಕ ನಾವು ಗಳಿಸಿದ ಸಾಧನೆಗಳಿಗೆ ಅಪಾಯ ಎದುರಾಗಿದೆ ಎಂದು ನುಡಿದರು.
ವೃತ್ತಿಪರರು ನಾಗರಿಕ ಪ್ರಜ್ಞೆಯನ್ನು ಬೆಳೆಸುವುದರ ಜೊತೆಗೆ ತಾಂತ್ರಿಕ ಕೌಶಲ್ಯಗಳನ್ನು ಗಳಿಸಿಕೊಳ್ಳಬೇಕಾಗಿದೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ರಕ್ಷಣೆಗೆ ಶ್ರಮಿಸಬೇಕಾಗಿದೆ. ವೃತ್ತಿಪರ ಶಿಕ್ಷಣದಲ್ಲಿ ನಾಗರಿಕ ಸಾಕ್ಷರತೆಯನ್ನು ಸೇರಿಸಿಕೊಳ್ಳಬೇಕಾಗಿರುವುದು ಅಗತ್ಯ ಎಂದರು.
ಗಮನಾರ್ಹ ವಿದ್ಯಾರ್ಥಿಗಳ ಭಾಗವಹಿಸುವಿಕೆ:
ಕರ್ನಾಟಕದ ಶೈಕ್ಷಣಿಕ ರಾಜಧಾನಿ ಎಂದು ಕರೆಯಲ್ಪಡುವ ಮಂಗಳೂರಿನಲ್ಲಿ ನಡೆದ 29ನೇ ‘ಪ್ರೊಫ್ ಕಾನ್’ನಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಗಮನಾರ್ಹವಾಗಿತ್ತು. ಕೇರಳದ ಎಲ್ಲಾ ಜಿಲ್ಲೆಗಳಿಂದ ಮತ್ತು ಬೆಂಗಳೂರು, ಹೈದರಾಬಾದ್, ಚೆನ್ನೈ ಮತ್ತು ದಿಲ್ಲಿ ಸೇರಿದಂತೆ ದೇಶಾದ್ಯಂತ ಪ್ರಮುಖ ನಗರಗಳಿಂದ ಹಾಗೂ ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ನೂರಾರು ವಿದ್ಯಾರ್ಥಿ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
ಸಮ್ಮೇಳನಕ್ಕೆ ಆಗಮಿಸುವವರಿಗೆ ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಿಂದ ಬಸ್ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. ಸಮ್ಮೇಳನ ಅಧಿವೇಶನಗಳು ಮುಂಬೈನ ವಿಸ್ಡಮ್ ಇಸ್ಲಾಮಿಕ್ ಆರ್ಗನೈಸೇಶನ್ ರಾಜ್ಯ ಉಪಾಧ್ಯಕ್ಷ ಸೈಯದ್ ಪಟೇಲ್, ಫೈಸಲ್ ಮೌಲವಿ ಪುದುಪ್ಪರಂಬ, ಕಾರ್ಯದರ್ಶಿ ಅಬ್ದುಲ್ ಮಲಿಕ್ ಸಲಾಫಿ ಮತ್ತು ಇತರ ಅನೇಕ ವಿದ್ವಾಂಸರು ಮತ್ತು ಯುವ ಮುಖಂಡರು ಭಾಗವಹಿಸಿ ಸಮ್ಮೇಳನದಲ್ಲಿ ವಿವಿಧ ಅಧಿವೇಶನಗಳನ್ನು ನಡೆಸಿದರು.
ಅಧಿವೇಶನದಲ್ಲಿ ಕಲ್ಲಿಕೋಟೆಯ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಭೌಗೋಳಿಕ ರಾಜಕೀಯ ವಿಶ್ಲೇಷಕ ಮತ್ತು ಇತಿಹಾಸ ಪ್ರಾಧ್ಯಾಪಕ ಡಾ. ಪಿ.ಜೆ. ವಿನ್ಸೆಂಟ್ ಮತ್ತು ಡಾ. ಅಬ್ದುಲ್ಲಾ ಬಾಸಿಲ್ ಸಿ.ಪಿ. ಭಾಗವಹಿಸಿದ್ದರು. ಸಮ್ಮೇಳನವು ಫೆಲೆಸ್ತೀನಿಯನ್ ಜನರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿತು.
’ಆಡಳಿತ ವಿಫಲವಾದಾಗ, ಜನರು’ ಎಂಬ ಚರ್ಚೆಯಲ್ಲಿ ಎಂಎಸ್‌ಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಪಿ.ವಿ. ಅಹ್ಮದ್ ಸಾಜು ಮತ್ತು ಯುವ ಕಾಂಗ್ರೆಸ್‌ನ ಡಾ. ಜಿಂಟೋ ಜಾನ್ ಭಾಗವಹಿಸಿದ್ದರು.
ವಿಸ್ಡಮ್ ಮಹಿಳಾ ರಾಜ್ಯ ಅಧ್ಯಕ್ಷೆ ಡಾ. ಸಿ. ರಝೀಲಾ ಮತ್ತು ವಿಸ್ಡಮ್ ಗರ್ಲ್ಸ್ ರಾಜ್ಯ ಅಧ್ಯಕ್ಷೆ ಟಿ.ಕೆ. ಹನೀನಾ ಮಹಿಳಾಗೋಷ್ಠಿಯ ನೇತೃತ್ವ ವಹಿಸಿದ್ದರು.
‘ಆಧುನಿಕ ವ್ಯಸನಗಳನ್ನು ನಿಭಾಯಿಸುವುದು ಹೇಗೆ ’? ಎಂಬ ಕಾರ್ಯಾಗಾರವನ್ನು ಶೇಖ್ ಅಬ್ದುಸ್ಸಲಾಮ್ ಮದನಿ ಮತ್ತು ಶಫೀಕ್ ಬಿನ್ ರಹೀಮ್ ನಡೆಸಿಕೊಟ್ಟರು.
ರಾಜಕೀಯದಲ್ಲಿ ಹಿಂಸಾಚಾರ ಖಂಡನೀಯ: ಪ್ರೊಫ್‌ಕಾನ್
ವಿಸ್ಡಮ್ ಇಸ್ಲಾಮಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ರಾಜ್ಯ ಸಮಿತಿಯು ಮಂಗಳೂರಿನಲ್ಲಿ ಆಯೋಜಿಸಿದ್ದ 29ನೇ ‘ಪ್ರೊಫ್ಕಾನ್’ ಜಾಗತಿಕ ವೃತ್ತಿಪರ ವಿದ್ಯಾರ್ಥಿಗಳ ಸಮ್ಮೇಳನವು ದೇಶಾದ್ಯಂತ ವೃತ್ತಿಪರ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಬೇರೂರುತ್ತಿರುವ ಹಿಂಸಾಚಾರ ಮತ್ತು ಪ್ರಜಾಪ್ರಭುತ್ವ ವಿರೋಧಿ ಸಂಸ್ಕೃತಿಯನ್ನು ಬಲವಾಗಿ ಖಂಡಿಸಿದೆ ಮತ್ತು ಅಂತಹ ಪ್ರವೃತ್ತಿಗಳ ವಿರುದ್ಧ ವಿದ್ಯಾರ್ಥಿ ಸಮುದಾಯ ಒಗ್ಗೂಡುವಂತೆ ಕರೆ ನೀಡಿದೆ.
ಜ್ಞಾನ ಮತ್ತು ಸಾಮಾಜಿಕ ಪ್ರಜ್ಞೆಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕಾದ ಶಿಕ್ಷಣ ಸಂಸ್ಥೆಗಳು ಹಿಂಸೆ ಮತ್ತು ವಿಭಜನೆಯ ಸ್ಥಳಗಳಾಗುತ್ತಿರುವುದು ದುರದೃಷ್ಟಕರ ಎಂದು ಸಮ್ಮೇಳನವು ಅಭಿಪ್ರಾಯಪಟ್ಟಿದೆ.
ಕ್ಯಾಂಪಸ್‌ಗಳಲ್ಲಿ ಹಿಂಸಾತ್ಮಕ ರಾಜಕೀಯವನ್ನು ಪ್ರೋತ್ಸಾಹಿಸಬಾರದು, ಅದು ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಮಾದರಿಗಳಾಗಿರಬೇಕು ಎಂದು ಸಮ್ಮೇಳನವು ರಾಜ್ಯ ಸರಕಾರಗಳನ್ನು ಆಗ್ರಹಿಸಿದೆ.