×
Ad

ಧರ್ಮಸ್ಥಳ ಪ್ರಕರಣ: ಶ್ರೀಕ್ಷೇತ್ರ ಧರ್ಮಸ್ಥಳ ಪರವಾಗಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವಕಾಲತ್ತು ಸಲ್ಲಿಕೆ

Update: 2025-12-31 21:58 IST

ಬೆಳ್ತಂಗಡಿ: ದೇಶಾದ್ಯಂತ ಭಾರಿ ಸುದ್ದಿಯಾಗಿದ್ದ ಧರ್ಮಸ್ಥಳ ಪ್ರಕರಣ ಸಂಬಂಧ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವಕಾಲತ್ತು ಸಲ್ಲಿಕೆಯಾಗಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೊಕದ್ದಮೆ ಸಂಖ್ಯೆ 39/2025ರ ಸಂಬಂಧ ಬೆಂಗಳೂರಿನ ಹಿರಿಯ ನ್ಯಾಯವಾದಿ ಸಿ.ವಿ. ನಾಗೇಶ್ ಹಾಗೂ ಪುತ್ತೂರಿನ ಮಹೇಶ್ ಕಜೆ ವಕಾಲತ್ತು ಸಲ್ಲಿಸಿದ್ದು, ಡಿ.31ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ಕ್ಷೇತ್ರದ ಪರವಾಗಿ ವಾದ ಮಂಡಿಸಿದ್ದಾರೆ. ವಾದ ಆಲಿಸಿದ ನ್ಯಾಯಲಯ ವಿಚಾರಣೆಯನ್ನು ಜ.3 ಕ್ಕೆ ಮುಂದೂಡಿದ್ದಾರೆ.

ಪ್ರಕರಣ ಸಂಬಂಧ ಸದ್ಯ ಎಸ್ಐಟಿ ತನಿಖೆ ನಡೆಸುತ್ತಿದ್ದು, ಈ ಬಗ್ಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಕೂಡ ಸಲ್ಲಿಕೆಯಾಗಿದೆ. ಆ ವರದಿಯಲ್ಲಿ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಿರುವ ಬಗ್ಗೆ ಎಸ್.ಐ.ಟಿ ಆರು ಮಂದಿಯ ವಿರುದ್ಧ ಆರೋಪ ಮಾಡಿದೆ. ಆದರೆ ಆರೋಪಿಗಳ ವಿರುದ್ಧ ಈ ವರೆಗೆ ಎಸ್ಐಟಿ ಕ್ರಮ ಕೈಗೊಂಡಿಲ್ಲ. ಇದಕ್ಕಾಗಿ ಎಸ್.ಐ.ಟಿ ನ್ಯಾಯಲಯದಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇನ್ನೂ ಮುಂದುವರಿದಿದೆ. ಇದೀಗ ಇದೇ ಮೊದಲ ಬಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳದವರು ಈ ಪ್ರಕರಣದಲ್ಲಿ ನೇರವಾಗಿ ಸೇರ್ಪಡೆಯಾಗಿದ್ದು, ಧರ್ಮಸ್ಥಳ ಪರವಾಗಿ ವಾದ ಮಂಡನೆ ನಡೆದಿದೆ.

ಎಸ್​​ಐಟಿ ವರದಿ ಸಂಬಂಧ ಜ.3ಕ್ಕೆ ಬೆಳ್ತಂಗಡಿ ಆದೇಶವನ್ನು ಕಾದಿರಿಸಿದ್ದು, ಈ ಹಿನ್ನಲೆಯಲ್ಲಿ ಇದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ನ್ಯಾಯಾಲಯದಲ್ಲಿ ವಾದ ಮಂಡಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನ್ಯಾಯವಾದಿ ಮಹೇಶ್ ಕಜೆ ಅವರು ಸಂತ್ರಸ್ತರು ಎಂಬ ನೆಲೆಯಲ್ಲಿ ಧರ್ಮಸ್ಥಳ ಪರವಾಗಿ ವಕಾಲತು ಸಲ್ಲಿಸಲಾಗಿದೆ. ಇಡೀ ಪ್ರಕರಣದಲ್ಲಿ ಧರ್ಮಸ್ಥಳ ದೇವಸ್ಥಾನವನ್ನು ಉಲ್ಲೇಖ ಮಾಡಲಾಗಿದ್ದು ಸಂತ್ರಸ್ತರಾಗಿದ್ದ ಅವರಿಗೂ ಈ ಪ್ರಕರಣದಲ್ಲಿ ಸ್ವತಹ ಭಾಗಿಯಾಗಲು ಅವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ.

ಜ.3ಕ್ಕೆ ಮತ್ತೆ ವಿಚಾರಣೆಗೆ ದಿನಾಂಕ ನಿಗದಿ ಮಾಡಿದ್ದಾರೆ. ಇದಕ್ಕೆ ಪೂರಕವಾಗಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇದಕ್ಕೆ ಯಾವುದೇ ಆಕ್ಷೇಪ ಸಲ್ಲಿಕೆಯಾಗಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಆರೋಪ ಇರುವುದೇ ಧರ್ಮಸ್ಥಳ ವಿರುದ್ಧ ಧರ್ಮಸ್ಥಳವನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ನಲ್ಲಿ ಆರೋಪಿಗಳು ಈ ಹಿಂದೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಕರಣ ದಲ್ಲಿ ಭಾಗಿಯಾಗಲು ಸಂತ್ರಸ್ತರಾಗಿರುವವರ ವಾದಗಳನ್ನು ಮಂಡಿಸಲು ಅವಕಾಶ ನೀಡುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಪರವಾಗಿ ಅರ್ಜಿ ಸಲ್ಲಿಕೆಯಾಗಿದೆ. ನ್ಯಾಯಾಲಯದ ಮುಂದಿನ ತೀರ್ಮಾನದಂತೆ ಮುಂದಿನ ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News