ಮಂಗಳೂರು| ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ನಿವೃತ್ತಿ; ಬೀಳ್ಕೊಡುಗೆ
ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿ ಬುಧವಾರ ಸೇವಾ ನಿವೃತ್ತಿಯಾದ ಅಬೂಬಕ್ಕರ್ ಅವರಿಗೆ ದಕ್ಷಿಣ ಕನ್ನಡ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಮಂಗಳೂರಿನ ಪಾಂಡೇಶ್ವರದಲ್ಲಿರುವ ಮೌಲಾನಾ ಆಝಾದ್ ಭವನದಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಅವರು, "1986ರಲ್ಲಿ ಸರ್ಕಾರಿ ಸೇವೆಗೆ ಸೇರಿದ್ದೆ. 39 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿರುವುದಕ್ಕೆ ತೃಪ್ತಿ ಇದೆ. ಸಹಕಾರ ನೀಡಿದ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ" ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ದಕ್ಷಿಣ ಕನ್ನಡ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್"ಅಬೂಬಕ್ಕರ್ ಅವರು ನಮ್ಮ ಇಲಾಖೆಯಲ್ಲಿ ಅತ್ಯಂತ ಹಿರಿಯ ಸಹೋದ್ಯೋಗಿ, ಎಲ್ಲ ಸಹೋದ್ಯೋಗಿ ಗಳೊಂದಿಗೆ ಬಹಳ ಅನ್ಯೋತ್ಯತೆಯಿಂದ ಸೇವೆ ಸಲ್ಲಿಸಿರುವುದು ನಮಗೆ ಖುಷಿ ತಂದಿದೆ. ಅವರ ಪ್ರಾಮಾಣಿಕ ಸೇವೆಯನ್ನು ಇಲಾಖೆಯು ಶ್ಲಾಘಿಸುತ್ತದೆ. ಅವರ ನಿವೃತ್ತಿ ಜೀವನವು ಸುಖಃಕರವಾಗಿರಲಿ" ಎಂದು ಶುಭ ಹಾರೈಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಫಾರೂಕ್ ಮಾತನಾಡಿ, ಅಬೂಬಕ್ಕರ್ ಅವರಿಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ವಕ್ಫ್‌ನ ಲೆಕ್ಕಪರಿಶೋಧಕ ಅನ್ವರ್ ಮುಸ್ತಫಾ, ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಮಂಜುನಾಥ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಯಶೋಧರ್, ಸಿಬ್ಬಂದಿ ಫಕೀರಪ್ಪ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.