×
Ad

ಭರವಸೆ ಈಡೇರಿಸದ ಬಿಜೆಪಿ ಬಗ್ಗೆ ಅಸಮಾಧಾನ, ಮುಂದಿನ ನಡೆ ಬಗ್ಗೆ ಪುತ್ತಿಲ ಪರಿವಾರದ ಚರ್ಚೆ

Update: 2025-09-10 23:33 IST

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಬಿಜೆಪಿ ಪದಾಧಿಕಾರಿಗಳಾಗಿ ಪಕ್ಷದಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರಮುಖರ ಸಭೆಯು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭ ಭರವಸೆ ಈಡೇರಿಸದ ಬಿಜೆಪಿ ಬಗ್ಗೆ ಅಸಮಾಧಾನ ವ್ಯಕ್ತವಾಯಿತು.

ಪುತ್ತಿಲ ಪರಿವಾರ ಬಿಜೆಪಿ ಜೊತೆ ವಿಲೀನವಾದ ಸಂದರ್ಭ ಪಕ್ಷದ ಮತ್ತು ಸಂಘದ ಪ್ರಮುಖ ನಾಯಕರು ಅರುಣ್ ಪುತ್ತಿಲರಿಗೆ ನೀಡಿದ ಭರವಸೆಯನ್ನು ಈಡೇರಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪಕ್ಷದ ಪದಾಧಿಕಾರಿಗಳು ತಮ್ಮ ಮುಂದಿನ ನಡೆಯ ಬಗ್ಗೆ ಅಭಿಪ್ರಾಯ ಮಂಡಿಸಿದರು ಎಂದು ತಿಳಿದುಬಂದಿದೆ.

ಕಳೆದ ಲೋಕಸಭಾ ಚುನಾವಣಾ ಸಂದರ್ಭ ಸಂಸದರು, ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರು ನೀಡಿದ ಭರವಸೆ ಈಡೇರಿಸದಿರುವುದು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಕೆರಳಿಸಿದೆ. ಕೇಸರಿ ಶಾಲನ್ನು ಹಾಕುವ ಕಾರ್ಯಕರ್ತರನ್ನು ಅವಮಾನಿಸಿ ಹೇಳಿಕೆ ನೀಡುವ ಸಂಘ ಮತ್ತು ಪಕ್ಷದ ನಾಯಕರ ನಡೆಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು. ತಕ್ಷಣ ಪಕ್ಷದ ಮತ್ತು ಸಂಘದ ಹಿರಿಯರು ಸಮನ್ವಯ ಸಾಧಿಸಿ ಪರಿಹಾರ ಮಾಡಬೇಕೆಂದು ಈ ಸಭೆಯಲ್ಲಿ ನಿರ್ಣಯಿಸಲಾಯಿತು. ಮುಂದಿನ ಕೆಲಸ ಕಾರ್ಯಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದು ಟ್ರಸ್ಟಿನ ಅಧ್ಯಕ್ಷ ಮತ್ತು ತಂಡ ತೆಗೆದುಕೊಳ್ಳುವ ನಿರ್ಣಯಕ್ಕೆ ತಾವೆಲ್ಲರೂ ಬದ್ಧರಾಗಿರುವುದಾಗಿ ತಿಳಿಸಿದರು. ಸಂಘ ಶತಾಬ್ದಿಯ ನಿಮಿತ್ತ ನವಂಬರ್ ತಿಂಗಳಿನಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಮತ್ತು ಹಿಂದು ಸಾಮ್ರಾಜ್ಯೋತ್ಸವದ ಯಶಸ್ವಿಗೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕೆಂದು ನಿರ್ಣಯಿಸಲಾಯಿತು ಎಂದು ತಿಳಿದುಬಂದಿದೆ.

ಅರುಣ್‌ ಪುತ್ತಿಲರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲ್ ಹಾಗೂ ಪ್ರಶಾಂತ್ ನೆಕ್ಕಿಲಾಡಿ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಸಹಿತ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನಲ್ಲಿ ಗುರುತಿಸಿಕೊಂಡಿರುವ ಬಹುತೇಕ ಬಿಜೆಪಿ ಪದಾಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News