×
Ad

ಮಂಗಳೂರು: ಕುದ್ರೋಳಿ ವಧಾಗೃಹ ತೆರೆಯಲು ಡಿವೈಎಫ್‌ಐ ಆಗ್ರಹ

Update: 2025-11-09 23:54 IST

ಮಂಗಳೂರು: ನಗರದ ಅಧಿಕೃತ ವಧಾಗೃಹ ಕುದ್ರೋಳಿ ಕಸಾಯಿಖಾನೆಯನ್ನು ತೆರೆಯಬೇಕು ಎಂದು ಆಗ್ರಹಿಸಿರುವ ಡಿವೈಎಫ್‌ಐ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಬಡ ವ್ಯಾಪಾರಸ್ಥರ ಮೇಲೆ ಏಕಪಕ್ಷೀಯ ತೀರ್ಮಾನ ಕೈಗೊಂಡಿರುವ ಕ್ರಮವನ್ನು ಖಂಡಿಸಿದೆ.

ಮಂಗಳೂರಿನ ಮಾಂಸಹಾರಿಗಳಿಗೆ ಹಲವು ವರ್ಷಗಳಿಂದ ಕುದ್ರೋಳಿ ಕಸಾಯಿಖಾನೆಯು ಸಂಸ್ಕರಿತ ಆಡು, ದನ, ಕುರಿ ಮಾಂಸಗಳನ್ನು ಒದಗಿಸಿಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾ ಬಂದಿದೆ. ಮುಸ್ಲಿಂ ಮಾಂಸ ವ್ಯಾಪಾರಿಗಳು ಈ ಕಸಾಯಿಖಾನೆಯ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಕಸಾಯಿಖಾನೆಯ ನಿರ್ವಹಣೆ ಮಾಡುತ್ತಾ ನಗರ ಮತ್ತು ಹೊರಭಾಗದ ಸಣ್ಣ ವ್ಯಾಪಾರಿಗಳು ಮಾಂಸ ವ್ಯಾಪಾರದಲ್ಲಿ ತೊಡಗಿಸಿಕೊಂಡು ಜೀವನವನ್ನು ಸಾಗಿಸುತ್ತಿದ್ದರು ಮತ್ತು ನಗರಪಾಲಿಕೆಯ ಆದಾಯಕ್ಕೂ ಕಾರಣರಾಗಿದ್ದರು. ನಗರಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ದನದ ಮಾಂಸ ನಿಷೇಧಿಸುವ ಮತ್ತು ಸಂಘಪರಿವಾರದ ಅಜೆಂಡಾ ಜಾರಿಗೊಳಿಸಲು ಕುದ್ರೋಳಿ ಕಸಾಯಿಖಾನೆಯನ್ನು ವ್ಯವಸ್ಥಿತವಾಗಿ ಮುಚ್ಚಲಾಗಿತ್ತು ಎಂದು ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದೀಗ ಜಿಲ್ಲೆಯಲ್ಲಿ ಪೊಲೀಸರು ಜಾನುವಾರುಗಳನ್ನು ವಧೆ ಮಾಡಿ ಮಾರಾಟ ಮಾಡುವ ಕಸುಬು ಮಾಡಿಕೊಂಡಿರುವ ವ್ಯಾಪಾರಿಗಳನ್ನು ಭಯೋತ್ಪಾದಕರು ಎಂಬಂತೆ ಚಿತ್ರೀಕರಿಸಿ ಜೈಲಿಗೆ ಅಟ್ಟಲಾಗುತ್ತಿದೆ. ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗುತ್ತಿದೆ. ಕಾಂಗ್ರೆಸ್ ಸರಕಾರದಿಂದ ಸೂಕ್ತ ರಕ್ಷಣೆ ಸಿಗಬಹುದು ಎಂದು ಭರವಸೆಯಲ್ಲಿದ್ದ ಮುಸ್ಲಿಂ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಮಸೀದಿಗೆ ಪೊಲೀಸರು ತೆರಳಿ ಕಾನೂನಿನ ಪಾಠ ಮಾಡುತ್ತಿರುವುದು ವಿಪರ್ಯಾಸ ಎಂದು ತಿಳಿಸಿರುವ ಇಮ್ತಿಯಾಝ್ ಮಂಗಳೂರಿನ ಅಧಿಕೃತ ಕಸಾಯಿಖಾನೆಯ ಬೀಗ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News