×
Ad

ಎಸ್‌ಸಿಡಿಸಿಸಿ ಬ್ಯಾಂಕ್‌ನ ವ್ಯವಹಾರ ಹೆಚ್ಚಳಕ್ಕೆ ಪ್ರಯತ್ನ: ಬಾಲ್ಯೊಟ್ಟು

Update: 2025-10-11 22:00 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ) ವ್ಯವಹಾರದಲ್ಲಿ ಲಾಭದಾಯಕವಾಗಿ ಮುನ್ನಡೆಯುತ್ತಿದ್ದು, ಲಾಭ ಗಳಿಕೆ ಇನ್ನಷ್ಟು ಹೆಚ್ಚಬೇಕಿದೆ. ಈ ನಿಟ್ಟಿನಲ್ಲಿ ಬ್ಯಾಂಕ್‌ನ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಮತ್ತಷ್ಟು ಬದ್ದತೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಹಾಗೂ ದ.ಕ. ಜಿಲ್ಲಾ ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಒಂದು ದಿನದ ರಾಜ್ಯ ಮಟ್ಟದ ಕಾರ್ಯದಕ್ಷತೆ ತರಬೇತಿ ಕಾರ್ಯಕ್ರಮ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರ ಆಶಯದಂತೆ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಬ್ಯಾಂಕಿಂಗ್, ಸಹಕಾರಿ ಇಲಾಖೆ ಸಹಿತ ಡಿಸಿಸಿ ಬ್ಯಾಂಕ್‌ಗಳಿಗೆ ಸಂಬಂಸಿದ ಕಾನೂನು ತಿದ್ದುಪಡಿಗಳು, ಸುತ್ತೋಲೆಗಳ ಬಗ್ಗೆ ತರಬೇತಿಯಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದರು.

*ಎಸ್‌ಸಿಡಿಸಿಸಿ ಬ್ಯಾಂಕ್ ಪ್ರಥಮ ಸ್ಥಾನದಲ್ಲಿದೆ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ಎಸ್‌ಸಿಡಿಸಿಸಿ ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಬ್ಯಾಂಕ್‌ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಬ್ಯಾಂಕಿಂಗ್ ಕ್ಷೇತ್ರದ ಹೊಸ ಬೆಳವಣಿಗೆಗಳು, ವ್ಯವಹಾರ ನೀತಿಗಳ ಬಗ್ಗೆ ತರಬೇತಿ ಅಗತ್ಯ. ಎನ್‌ಪಿಎ ಪ್ರಮಾಣ ಶೂನ್ಯಗೊಳಿಸಿ, ಠೇವಣಿ ಹೆಚ್ಚಿಸಬೇಕು. ಸಾಲ ನೀಡಿಕೆಯಲ್ಲಿ ಹಿಂದುಳಿಯಬಾರದು. ಗ್ರಾಹಕರಿಗೆ ಗೌರವದೊಂದಿಗೆ ಸೇವೆ ನೀಡಬೇಕು ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಜಯಕರ ಶೆಟ್ಟಿ ಬಿ. ಇಂದ್ರಾಳಿ ಮಾತನಾಡಿ, ಎಸ್‌ಸಿಡಿಸಿಸಿ ಬ್ಯಾಂಕ್ ರಾಜ್ಯ, ರಾಷ್ಟ್ರದಲ್ಲೇ ಗೌರವಕ್ಕೆ ಪಾತ್ರವಾದ ಮಾದರಿ ಬ್ಯಾಂಕ್ ಆಗಿದೆ. ಡಾ.ಎಂ.ಎನ್. ರಾಜೇಂದ್ರಕುಮಾರ್ ಅವರ ನೇತೃತ್ವದಲ್ಲಿ ಬ್ಯಾಂಕ್ ಹಾಗೂ ಸಹಕಾರ ಕ್ಷೇತ್ರ ಉನ್ನತ ಸ್ಥಾನದಲ್ಲಿದೆ ಎಂದರು.

ಸಮಗ್ರ ಸಾಧನೆಗೆ ಪುರಸ್ಕಾರ : 2024-25ನೇ ಸಾಲಿನಲ್ಲಿ ತಾಲೂಕು ಮಟ್ಟದ ಸಮಗ್ರ ಸಾಧನೆಗಾಗಿ 8 ಶಾಖೆಗಳ ವ್ಯವಸ್ಥಾಪಕರಿಗೆ ಗೌರವಾರ್ಪಣೆ ಮಾಡಲಾಯಿತು. ಕಾಟಿಪಳ್ಳ ಶಾಖೆಯ ಕೇಸರಿ ಶೆಟ್ಟಿ , ಸಿದ್ದಕಟ್ಟೆಯ ಜ್ಯೋತಿ ಶರ್ಮ, ಪುತ್ತೂರು ಮೈನ್‌ರೋಡ್‌ನ ಜಲಜಾ ಸುದರ್ಶನ್, ನಾರಾವಿಯ ಮಹೇಶಕುಮಾರ ಬಿ, ಬೆಳ್ಳಾರೆಯ ಸಂತೋಷ್‌ಕುಮಾರ್ ಎಂ., ಸಾಸ್ತಾನದ ಗೀತಾ ಶೆಟ್ಟಿ, ಉಪ್ಪುಂದದ ಜಿ. ಶಂಕರ ಶೆಟ್ಟಿ, ಬಜಗೋಳಿಯ ಶಾಂತಲಾ ಅವರು ಗೌರವಾರ್ಪಣೆ ಸ್ವೀಕರಿಸಿದರು. ಜತೆಗೆ ಸಾಧನೆಗೈದ ಎಸ್‌ಸಿಡಿಸಿಸಿ ಬ್ಯಾಂಕ್‌ನ ನಾನಾ ಶಾಖೆ ಹಾಗೂ ಸಾಧಕ ಸಿಬ್ಬಂದಿಗೆ ಗೌರವಾರ್ಪಣೆ ಮಾಡಲಾಯಿತು.

ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್. ರಮೇಶ್, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ. ರಾಜಾರಾಮ ಭಟ್, ವಾದಿರಾಜ ಶೆಟ್ಟಿ , ದೇವಿಪ್ರಸಾದ್ ಶೆಟ್ಟಿ ಬೆಳಪು, ಸದಾಶಿವ ಉಳ್ಳಾಲ್, ಸಿಇಒ ಕೆ. ಗೋಪಾಲಕೃಷ್ಣ ಭಟ್ , ಸಹಕಾರಿ ಯೂನಿಯನ್ ನಿರ್ದೇಶಕ ಕೆ. ಸಂಜೀವ ಪೂಜಾರಿ, ಸಾವಿತ್ರಿ ರೈ ಕೆ. ಬ್ಯಾಂಕಿನ ಜಿಎಂ ಸುನಿಲ್ ಕುಮಾರ್ ಹೊಳ್ಳ ಉಪಸ್ಥಿತರಿದ್ದರು.

ಶ್ರೀಶ ಕೆ.ಎಂ., ಭರತ್ ಕೆ.ಎನ್. ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸಹಕಾರಿ ಯೂನಿಯನ್ ನಿರ್ದೇಶಕ ಎಸ್.ಆರ್. ಹರೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ. ಹಿರೇಮಠ ಹಾಗೂ ಬ್ಯಾಂಕಿನ ಎಜಿಎಂ ರಾಜೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News