ಫುಟ್ಬಾಲ್ ನನ್ನ ಜೀವಾಳ: ಡಾ. ಅಮರ್ ಪ್ರೀತ್‌ಪಾಲ್
ಮಂಗಳೂರಿನಲ್ಲಿ ಆಟಗಾರನಾಗಿದ್ದ ಮಲೇಷ್ಯಾದ ಮಾಜಿ ಉಪ ಸಭಾಪತಿಗೆ ಸನ್ಮಾನ
ಮಂಗಳೂರು: ಫುಟ್ಬಾಲ್‌ನಿಂದಾಗಿ ನಾನಿಲ್ಲಿ ಸೇರುವಂತಾಯಿತು. ಫುಟ್ಬಾಲ್ ನನ್ನ ಜೀವಾಳವಾಗಿದೆ. ಮಂಗಳೂರಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಪೋಷಕರಿಂದ ಕ್ರೀಡೆಗೆ ಪ್ರೋತ್ಸಾಹ ಸಿಗುತ್ತಿರಲಿಲ್ಲ. ಹೀಗಿದ್ದರೂ ನಾನು ಮಾತ್ರ ಫುಟ್ಬಾಲ್‌ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೆ ಎಂದು ಮಲೇಷ್ಯಾ ಸರಕಾರದ ಮಾಜಿ ಉಪಸ್ಪೀಕರ್ ಡಾ. ಅಮರ್ ಪ್ರೀತ್‌ಪಾಲ್ ಬಿನ್ ಅಬ್ದುಲ್ಲಾ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಎಕ್ಸ್ ಫುಟ್ಬಾಲ್ ಪ್ಲೇಯರ್‌ಯೂನಿಯನ್ ಆಶ್ರಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ಪೀಕರಿಸಿ ಮಾತನಾಡಿದರು.
ನಾನು ಮಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ ನನ್ನ ಪಯಣ ಫುಟ್ಬಾಲ್ ಮತ್ತು ವಿದ್ಯಾಭ್ಯಾಸದೊಂದಿಗೆ ಸಾಗುತ್ತಿತ್ತು. ಮಂಗಳೂರಿನಲ್ಲಿ 8 ವರ್ಷಗಳ ಕಾಲ ವಿದ್ಯಾರ್ಥಿಯಾಗಿದ್ದೆ. ಆಗ ಮಂಗಳೂರಿನಲ್ಲಿ ನನಗೆ ಎರಡು ತಂಡಗಳು ತಮ್ಮ ತಂಡಗಳಿಗೆ ಸೇರುವಂತೆ ಆಫರ್ ನೀಡಿತ್ತು ಎಂದು ನೆನಪಿಸಿಕೊಂಡರು.
ನಾನು ಮಂಗಳೂರಿನಿಂದ ಹೋದ ಬಳಿಕವು ಫುಟ್ಬಾಲ್‌ನಲ್ಲಿ ತೊಡಗಿಸಿಕೊಂಡಿದ್ದೆ . ಮುಂದಿನ ದಿನಗಳಲ್ಲಿ ಫುಟ್ಬಾಲ್‌ನಲ್ಲಿ ವಿಭಿನ್ನ ಸಾಧನೆ ಮಂಗಳೂರಿನಲ್ಲಿ ಸೃಷ್ಟಿಸೋಣ ಎಂದವರು ಹೇಳಿದರು.
ದ.ಕ ಜಿಲ್ಲಾ ಫುಟ್ಬಾಲ್ ಅಸೋಷಿಯೆಷನ್ ಕಾರ್ಯದರ್ಶಿ ಹುಸೈನ್ ಬೋಳಾರ್ ಮಾತನಾಡಿ, ಇಲ್ಲಿರುವ ಎಲ್ಲಾ ಹಿರಿಯ ಆಟಗಾರರು ರಾಜ್ಯ ಮಟ್ಟದಲ್ಲಿ ಆಡುವ ಕನಸು ಕಂಡಿದ್ದರು. ಆದರೆ ಅದು ಆ ಕಾಲದಲ್ಲಿ ಈಡೇರಲಿಲ್ಲ. ಈಗಿನ ಆಟಗಾರರಿಗೆ ಬೇಕಾದ ಎಲ್ಲಾ ರೀತಿಯ ಸೌಕರ್ಯ ಮಂಗಳೂರಿನಲ್ಲಿದೆ. ಅದನ್ನು ಅಸೋಷಿಯೆಷನ್ ಕಲ್ಪಿಸಿದೆ ಎಂದವರು ಹೇಳಿದರು.
ದ.ಕ ಜಿಲ್ಲಾ ಫುಟ್ಬಾಲ್ ಅಸೋಷಿಯೆಷನ್ ಬಿ ಎಂ ಅಸ್ಲಂ ಮಾತನಾಡಿ, ಹಿರಿಯ ಫುಟ್ಬಾಲ್ ಆಟಗಾರರು ಇಂದು ಆಯೋಜಿಸಿದ ರಿಯೂನಿಯನ್ ಕಾರ್ಯಕ್ರಮ ಇದೊಂದು ದೊಡ್ಡ ಕಾರ್ಯ. ಈ ಬಿಡುವಿಲ್ಲದ ಕಾಲದಲ್ಲಿ ಇಂತಹ ಅದ್ಬುತ ಕಾರ್ಯಕ್ರಮ ಮಾಡಿರುವ ಆಯೋಜಕರ ಶ್ರಮ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಫುಟ್ಬಾಲ್ ಆಟಗಾರರಾದ ಬಶೀರ್, ರವೂಫ್, ತಿರುಮಲ, ಹಿರಿಯರಾದ ಅಬ್ದುಲ್ಲಾ, ಮೋಹನ್ ಬೆಂಗ್ರೆ, ಕರ್ನಾಟಕ ಫುಟ್ಬಾಲ್ ಅಸೋಷಿಯೇಷನ್ ರೆಫ್ರಿ ನವಾಝ್ ಮತ್ತಿತರರು ಉಪಸ್ಥಿತರಿದ್ದರು.