ಗೂಡಿನಬಳಿ ವೆಲ್ಫೇರ್ ಅಸೋಸಿಯೇಶನ್ ಸೌದಿ ಅರೇಬಿಯಾ - ಸಮನ್ವಯ ಸಮಿತಿ ವತಿಯಿಂದ ವಿದ್ಯಾರ್ಥಿ ವೇತನ, ಮಾರ್ಗದರ್ಶನ ಶಿಬಿರ
ಬಂಟ್ವಾಳ: ಗೂಡಿನಬಳಿ ವೆಲ್ಫೇರ್ ಅಸೋಸಿಯೇಶನ್ ಸೌದಿ ಅರೇಬಿಯಾ, ಸಮನ್ವಯ ಸಮಿತಿ ಗೂಡಿನಬಳಿ ಇದರ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಮಾರ್ಗದರ್ಶನ ಶಿಬಿರವು ಗೂಡಿನಬಳಿಯ ಜಿ.ಎಂ. ರೆಸಿಡೆನ್ಸಿಯಲ್ಲಿ ಶನಿವಾರ ನಡೆಯಿತು.
ಸಂಸ್ಥೆಯ ಚೇಯರ್ ಮ್ಯಾನ್ ಜಿ.ಕೆ.ಮುಹಮ್ಮದ್ ಸಲೀಂ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಅಲೀ ರಿಝ್ವಾನ್ ಜಿ.ಕೆ ಕಿರಾಅತ್ ಪಠಿಸಿದರು. ಮಸ್ಜಿದ್-ಎ-ಮುತ್ತಲಿಬ್ ಗೂಡಿನಬಳಿ ಇದರ ಖತೀಬ್ ಅಶ್ರಫ್ ಫೈಝಿ ದುವಾ ಆಶಿರ್ವಾಚನಗೈದರು.
ಸಮನ್ವಯ ಸಮಿತಿಯ ಅಧ್ಯಕ್ಷರಾದ ಜಿ.ಎಂ ಅನ್ವರ್ ಹುಸೈನ್ ಸ್ವಾಗತ ಭಾಷಣ ಮಾಡಿದರು. ಸ್ಥಳೀಯ ಕಾಲೇಜಿನ ಪ್ರಾಂಶುಪಾಲರಾದ ಯೂಸುಫ್ ಅವರು ಕಾರ್ಯಕ್ರಮ ಉದ್ಫಾಟಿಸಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಫೀಕ್ ಮಾಸ್ಟರ್ ಹಿತವಚನ ನುಡಿದರು. ಮಕ್ಕಳು ಬಾಲ್ಯದಲ್ಲಿ ಪುಸ್ತಕವನ್ನು ತಲೆ ತಗ್ಗಿಸಿ ಓದಿದರೆ ಮುಂದಕ್ಕೆ ಅವರನ್ನು ಪುಸ್ತಕ ತಲೆ ಎತ್ತುವಂತೆ ಮಾಡುತ್ತದೆ. ಹಾಗೆಯೇ ಮೊಬೈಲ್ ಅನ್ನು ತಲೆ ತಗ್ಗಿಸಿ ನೋಡಿದರೆ ಮುಂದೆ ಅದು ತಲೆ ಎತ್ತದಂತೆ ಮಾಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಊರಿನ ಸುಮಾರು 40 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸ್ಮರಣ ಸಂಚಿಕೆಯನ್ನು ನೀಡಿ ಗೌರವಿಸಲಾಯಿತು. ಮತ್ತು ಸ್ಥಳೀಯ ಪದವಿ ಪೂರ್ವ ಕಾಲೇಜಿನ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಅಧಿಕ ಅಂಕಗಳಿಸಿರುವ ವಿದ್ಯಾರ್ಥಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಸಂಸ್ಥೆಯ ಕೇಂದ್ರ ಸಮಿತಿ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಜಿ.ಕೆ, ಉಪಾಧ್ಯಕ್ಷರಾದ ಜಿ.ಕೆ ರಿಝ್ವಾನ್ ಹಾಗೂ ಬಿ.ಎ. ಆಸೀಫ್, ಪ್ರಧಾನ ಕಾರ್ಯದರ್ಶಿ ಜಿ.ಕೆ ಜೌಹಾರ್, ಕೋಶಾಧ್ಯಾಕ್ಷ ಜಿ.ಎಂ ಅಮೀರ್ ಹುಸೈನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸಮನ್ವಯ ಸಮಿತಿಯ ಕಾರ್ಯದರ್ಶಿ ಜಿ.ಕೆ ಅಬ್ದುಲ್ ರಶೀದ್ ಕೋಟಿಹಿತ್ತಿಲು ಹಾಗೂ ಜಿ.ಕೆ ಅತಾವುಲ್ಲಾ ಕಾರ್ಯಕ್ರಮ ನಿರೂಪಿಸಿದರು.