ಜ.4: ಗುರುಪುರ ಕೈಕಂಬದಲ್ಲಿ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ
ಮಂಗಳೂರು, ಜ.2: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಜ.4ರಂದು ಮಂಗಳೂರು ತಾಲೂಕಿನ ಗುರುಪುರ ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ ಹಮ್ಮಿ ಕೊಂಡಿದೆ ಎಂದು ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಗ್ಗೆ 9:30ಕ್ಕೆ ಗುರುಪುರ ಕೈಕಂಬದ ಸಬೀಲುಲ್ ಹುದಾ ಅಲ್‌ಬಿರ್ರ‌್ ಶಾಲಾ ವಠಾರದಿಂದ ಸಭಾಂಗಣದ ತನಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಹಾಜಿ ಎಂ.ಎಚ್. ಮೊಹಿದಿನ್ ಅಡ್ಡೂರು ಮೆರವಣಿಗೆ ಉದ್ಘಾಟಿಸಲಿದ್ದು, ಬೆಳಗ್ಗೆ 10ಕ್ಕೆ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗ್ಗೆ 10:15ಕ್ಕೆ ಸ್ಪೀಕರ್ ಯು.ಟಿ. ಖಾದರ್ ಸಮ್ಮೇಳನ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಕಾಡಮಿ ಅಧ್ಯಕ್ಷ ಉಮರ್ ಯು.ಎಚ್. ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಮ್ಮೇಳನದಲ್ಲಿ ಶಮೀಮಾ ಕುತ್ತಾರ್‌ರ ಪಡಿಞ್ಞಿರ್ರೊ ಪೂ (ಕಥಾ ಸಂಕಲನ), ಹಸೀನ ಮಲ್ನಾಡ್‌ರ ಮಿನ್ನಾಂಪುಲು (ಹನಿಗವನ ಸಂಕಲನ), ಎನ್.ಎಂ. ಹನೀಫ್ ನಂದರಬೆಟ್ಟು ಅವರ ಸಂಪುಕಾತ್ (ಕವನ ಸಂಕಲನ), ಬಶೀರ್ ಅಹ್ಮದ್ ಬೆಳ್ಳಾಯಿರು ಅವರ ಬೆಲ್‌ಚ (ಕವನ ಸಂಕಲನ), ಹೈದರಲಿ ಕಾಟಿಪಳ್ಳ ಅವರ ನಸೀಅತ್ (ಕವನ ಸಂಕಲನ) ಕೃತಿಗಳು ಬಿಡುಗಡೆಗೆಯಾಗಲಿವೆ.
ಮಧ್ಯಾಹ್ನ 12ಕ್ಕೆ ಸಮ್ಮೇಳನಾಧ್ಯಕ್ಷರ ಭಾಷಣದ ಮೇಲೆ ನಡೆಯಲಿರುವ ಚರ್ಚಾಗೋಷ್ಠಿಯಲ್ಲಿ ಪ್ರಾಧ್ಯಾಪಕ ಹೈದರ್ ಅಲಿ, ಪತ್ರಕರ್ತ ಏ.ಕೆ. ಕುಕ್ಕಿಲ, ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಮತ್ತು ಬ್ಯಾರಿ ಅಕಾಡಮಿಯ ಸದಸ್ಯೆ ಹಫ್ಸಾ ಬಾನು ಪಾಲ್ಗೊಳ್ಳಲಿದ್ದಾರೆ. ಮಂಗಳೂರು ವಿ.ವಿ. ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್ ಚರ್ಚಾಗೋಷ್ಠಿ ನಿರೂಪಿಸಲಿದ್ದಾರೆ.
ಮಧ್ಯಾಹ್ನ 2ಕ್ಕೆ ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು ಅಧ್ಯಕ್ಷತೆಯಲ್ಲಿ ನಡೆಯಲಿರುವ ಬ್ಯಾರಿ ಕವಿಗೋಷ್ಠಿಯಲ್ಲಿ ಬದ್ರುದ್ದೀನ್ ಕೂಳೂರು, ಖಲಂದರ್ ಬೀವಿ ಅಮಾನುಲ್ಲಾ, ಅಶ್ಫಾಕ್ ಅಹ್ಮದ್ ಕಾಟಿಪಳ್ಳ, ಶಾಹಿದಾ ಮಂಗಳೂರು, ಶಮೀಮ್ ಕುಟ್ಟಿಕಳ, ಅಸ್ಮತ್ ವಗ್ಗ, ನಾಫಿಲ ಶಬೀನ್ ಕೈಕಂಬ, ಮುಹಮ್ಮದ್ ಕುಂಞಿ ಮಾಸ್ಟರ್ ಅಡ್ಡೂರು ಕವನ ವಾಚಿಸಲಿದ್ದಾರೆ. ಅಪರಾಹ್ನ 3ಕ್ಕೆ ಮೂಡುಬಿದರೆಯ ಆಳ್ವಾಸ್ ಕಾಲೇಜಿನ ದಫ್ ತಂಡದಿಂದ ದಫ್ ಹಾಡು ಮತ್ತು ಬ್ಯಾರಿ ಹಾಡುಗಾರರ ತಂಡದಿಂದ ಹಾಡುಗಳ ಸಂಭ್ರಮವಿರಲಿದೆ.
ಸಂಜೆ 4ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅಬ್ದುಲ್ ಲತೀಫ್ ಗುರುಪುರ, ಪಾತುಂಞಿ ಮೂಡುಶೆಡ್ಡೆ, ಎಂ.ಪಿ. ಉಸ್ಮಾನ್ ಮುಕ್ರಿಕ ಸೂರಲ್ಪಾಡಿ, ಸುಲೈಮಾನ್ ಗುರುಪುರ, ಸಲೀಕಾ ಸೂರಲ್ಪಾಡಿ, ಆರ್.ಎಸ್. ಅಶ್ರಫ್ ಸೂರಲ್ಪಾಡಿ, ಅಬ್ದುಲ್ ಶರೀಫ್ ಸಾಮರಸ್ಯ ನ್ಯೂಸ್ ಮತ್ತು ಮುಹಮ್ಮದ್ ನಝೀರ್ ಬಜ್ಪೆಅವರನ್ನು ಸನ್ಮಾನಿಸಲಾಗುತ್ತದೆ.
ಕರ್ನಾಟಕ ಯಕ್ಷಗಾನ ಅಕಾಡಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ದ.ಕ. ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ, ಕಸಪಾ ದ.ಕ. ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬ್ಯಾರಿ ಇನ್ಫೋ.ಕಾಂನ ಮುಖ್ಯಸ್ಥ ಬಿ.ಎ. ಮುಹಮ್ಮದ್ ಅಲಿ ಸಮಾರೋಪ ಭಾಷಣ ಮಾಡಲಿದ್ದು, ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಂಜೆ 6:30ರಿಂದ ರಾತ್ರಿ 8ರ ತನಕ ಚಲನಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ಬ್ರೋಕರ್ ಪೋಕರ್ ಬ್ಯಾರಿ ನಾಟಕ ಮತ್ತು ಗುರುಪುರದ ಎಂ.ಜಿ.ಎಂ. ತಾಲೀಮು ತಂಡದಿಂದ ತಾಲೀಮು ಪ್ರದರ್ಶನ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಇ.ಕೆ.ಎ. ಸಿದ್ದೀಕ್ ಅಡ್ಡೂರು, ಕಾರ್ಯಕ್ರಮದ ಸದಸ್ಯ ಸಂಚಾಲಕ ತಾಜುದ್ದೀನ್ ಅಮ್ಮುಂಜೆ, ಅಕಾಡಮಿಯ ಸದಸ್ಯರಾದ ಯು.ಎಚ್. ಖಾಲಿದ್ ಉಜಿರೆ, ಅನ್ಸಾರ್ ಕಾಟಿಪಳ್ಳ, ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಎಂ.ಜಿ. ಸಾಹುಲ್ ಹಮೀದ್ ಗುರುಪುರ, ಸಲೀಂ ಹಂಡೇಲ್, ಕಾರ್ಯದರ್ಶಿಗಳಾದ ಅಬ್ದುಲ್ ಜಲೀಲ್ ಅರಳ ಎಂ.ಡಿ. ನವಾಝ್ ಉಪಸ್ಥಿತರಿದ್ದರು.
*ಬ್ಯಾರಿ ಭವನಕ್ಕೆ ಹೊಸ ನೀಲ ನಕ್ಷೆ: ಉಮರ್ ಯು.ಎಚ್.
ಉಳ್ಳಾಲ ತಾಲೂಕಿನ ಅಸೈಗೋಳಿಯ 51 ಸೆಂಟ್ಸ್ ಜಮೀನಿನಲ್ಲಿ ಬ್ಯಾರಿ ಸಾಹಿತ್ಯ ಅಕಾಡಮಿಯ ಭವನ ನಿರ್ಮಾಣಕ್ಕೆ ಎಲ್ಲಾ ಸಿದ್ಧತೆ ನಡೆದಿದ್ದು, ಮುಂದಿನ ತಿಂಗಳೊಳಗೆ ಬ್ಯಾರಿ ಭವನಕ್ಕೆ ಶಿಲಾನ್ಯಾಸ ನೆರವೇರುವ ಸಾಧ್ಯತೆ ಇದೆ. ಈ ಹಿಂದಿನ ಅವಧಿಯಲ್ಲಿ ತಯಾರಿಸಲಾದ ನೀಲನಕ್ಷೆಯನ್ನು ಬದಲಾಯಿಸಿ ಹೊಸ ನಕ್ಷೆಯನ್ನು ತಯಾರಿಸಲಾಗಿದೆ. ಇದರಲ್ಲಿ ಮ್ಯೂಸಿಯಂ, ಗ್ರಂಥಾಲಯ, ವಾಚನಾಲಯ, ಸಂಶೋಧನಾ ಕೇಂದ್ರ, ಬಹುವಿಧದ ಸಭಾಂಗಣ, ವಾಣಿಜ್ಯ ಕೊಠಡಿ ಇತ್ಯಾದಿ ಇರಲಿದೆ ಎಂದು ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.