×
Ad

ಹಣಕ್ಕೆ ಬೇಡಿಕೆ ಇಟ್ಟು ಸಂಘಪರಿವಾರ ಕಾರ್ಯಕರ್ತರಿಂದ ಕೃಷಿಕನ ಮೇಲೆ ದಾಳಿ: ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲು

Update: 2026-01-02 12:26 IST

ಮುಲ್ಕಿ: ಕೃಷಿಕರೊಬ್ಬರಿಂದ ಸಂಘಪರಿವಾರದ ಕಾರ್ಯಕರ್ತರು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ಕೊಡದೇ ಇದ್ದಾಗ ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಳಿಪಾಡಿ ಅಂಗಾರಗುಡ್ಡೆಯಲ್ಲಿ ಬುಧವಾರ ಸಂಜೆ ನಡೆದಿರುವ ಬಗ್ಗೆ ವರದಿಯಾಗಿದೆ.

ಮುಲ್ಕಿ ಕೆಳಗಿನಮನೆ ಶಂಸು ಸಾಹೇಬ್ ಎಂಬವರ ಮನೆಗೆ ಅಕ್ರಮ ಪ್ರವೇಶ ಮಾಡಿದ ಸಂಘಪರಿವಾರದ ಕಾರ್ಯಕರ್ತರು ಹಣ ಸುಲಿಗೆ ಮಾಡುವ ಉದ್ದೇಶದಿಂದ ಕೈಯಿಂದ ಹಲ್ಲೆ‌ಗೈದು, ಕಬ್ಬಿಣದ ರಾಡ್ ನಿಂದ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಒಡ್ಡಿರುವ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಆರೋಪಿಗಳನ್ನು ಶ್ಯಾಮಸುಂದರ್ ಶೆಟ್ಟಿ, ಅಕ್ಷಯ ಪೂಜಾರಿ, ಸುವಿನ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ‌.

ಮುಲ್ಕಿ ಕೆಳಗಿನಮನೆ ಶಂಸು ಸಾಹೇಬ್ ಅವರು ತಮ್ಮ ಜಾನುವಾರುಗಳನ್ನು ನೆರೆ ಮನೆಯ ಜಗ್ಗು ಶೆಟ್ಟಿರವರಿಗೆ ಸಂಬಂಧಿಸಿದ ಕೊಟ್ಟಿಗೆಯಲ್ಲಿ ಸಾಕುತ್ತಿದ್ದರು. ಇದರಲ್ಲಿ ಕೆಲವು ಕಂಬಳದ ಕೋಣಗಳಿದ್ದು, ಮುಲ್ಕಿ ಪಡುಪಣಂಬೂರು ಅರಸು ಕಂಬಳದಲ್ಲಿ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದವು.

ಗುರುವಾರ 11 ಗಂಟೆಗೆ ಕಾರಿನಲ್ಲಿ ಬಂದ ಆರೋಪಿಗಳು ಕೊಟ್ಟಿಗೆಯಲ್ಲಿರುವ ಜಾನುವಾರುಗಳ ಪೋಟೋ ಮತ್ತು ವಿಡಿಯೋ  ತೆಗೆದು ಅಲ್ಲಿಂದ ಹೋಗಿದ್ದರು. ಬಳಿಕ ಸಂಜೆ ಸಹಾಬುದ್ದೀನ್ ಹಾಗೂ ಅವರ ತಂದೆ ಸಂಶುದ್ದೀನ್ ಅವರು ಕಂಬಳದ ಕೋಣಗಳಿಗೆ ಎಣ್ಣೆಯಿಂದ ಮಾಲೀಶ್ ಮಾಡುತ್ತಿದ್ದ ಸಮಯ ಶ್ಯಾಮ್ ಸುಂದರ್ ಶೆಟ್ಟಿ ಮತ್ತು ಅಕ್ಷಯ ಪೂಜಾರಿ ಹಾಗೂ ಸುವೀನ್ ಎಂಬವರು ಕಾರಿನಲ್ಲಿ ಬಂದು ಕಬ್ಬಿಣದ ರಾಡ್ ಹಿಡಿದುಕೊಂಡು ಜಾನುವಾರು ಸಾಕುವ ಕೊಟ್ಟಿಗೆಯ ಬಳಿಯ ಮನೆಯ ಎದುರು ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕಂಬಳದ ಕೋಣಗಳ ಬಗ್ಗೆ ವಿಚಾರಿಸಿ ನಂತರ 50 ಸಾವಿರ ಹಣವನ್ನು ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ‌.

ಅದಕ್ಕೆ ಸಹಾಬುದ್ದೀನ್ ಅವರು ಯಾಕೆ ನಿಮಗೆ ಹಣ ಕೊಡಬೇಕು ಎಂದು ಕೇಳಿದಾಗ ಮಾತಿಗೆ ಮಾತು ಬೆಳೆದು ಬೈಯಲು ಪ್ರಾರಂಭಿಸಿದಾಗ ಜಗಳವಾಗಿದ್ದು, ಆರೋಪಿ ಶ್ಯಾಮ್ ಸುಂದರ್ ಶೆಟ್ಟಿ ಸಂತ್ರಸ್ತರ ತಲೆಗೆ ಕೈಯಿಂದ ಹೊಡೆದು ಕೋಣಗಳನ್ನು ಕಡಿಯಲು ತಂದಿದ್ದೀಯಾ ಎಂದು ಅವಾಚ್ಯವಾಗಿ ಬೈದಿದ್ದಾನೆ. ಈ ವೇಳೆ ಮತ್ತೋರ್ವ‌ ಆರೋಪಿ ಅಕ್ಷಯ ಪೂಜಾರಿ ಕೈಯಿಂದ ಎದೆಗೆ ಗುದ್ದಿ ಹಣಕ್ಕಾಗಿ ಬೇಡಿಕೆ ಇಟ್ಟರು. ಇದರಿಂದ‌ ವಿಚಲಿತರಾದ ಸಹಾಬುದ್ದೀನ್ ಮೊಬೈಲ್ ನಲ್ಲಿ ವಿಡಿಯೋ ಮಾಡಲು ಆರಂಭಿಸಿದಾಗ ಆರೋಪಿ ಸುವೀನ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಕಬ್ಬಿಣದ ರಾಡ್ ನಿಂದ ಸಹಾಬುದ್ದೀನ್ ಅವರ ತಲೆಗೆ ಬೀಸಿದ್ದು, ಅವರು ತಪ್ಪಿಸಿಕೊಂಡಿದ್ದಾರೆ.

ಆರೋಪಿ ಶ್ಯಾಮ್ ಸುಂದರ್ ಶೆಟ್ಟಿ  ಶಂಸು ಸಾಹೇಬ್ ಅವರ ಮೇಲೆ ಹಲ್ಲೆಗೆ ಯತ್ನಿಸಿದಾಗ ತಂದೆಯನ್ನು ರಕ್ಷಿಸುವ ಸಲುವಾಗಿ ಸಹಾಬುದ್ದೀನ್ ಅವರು ಆರೋಪಿಗಳನ್ನು ತಳ್ಳಿದ್ದಾರೆ‌. ಈ ವೇಳೆ ಸ್ಥಳೀಯರು ಬಂದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿರುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಣ ಸುಲಿಗೆ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಸಾಕುತ್ತಿರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅಡ್ಡಗಟ್ಟಿ ಕೈಯಿಂದ ಹಲ್ಲೆ ಮಾಡಿ, ರಾಡ್ ನಿಂದ ಬೀಸಿ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿರುವ ಆರೋಪಿಗಳ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತ ಕಲಂ 329,126(2), 308(4), 115(2) 351(3),3(5)ರಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ‌ ಕ್ರಮ‌ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News