×
Ad

ಮಂಗಳೂರು | ಜ.4ರಂದು ರಾಜಕೇಸರಿ ಸೇವಾ ಟ್ರಸ್ಟ್‌ನಿಂದ ಕ್ರಿಕೆಟ್ ಪಂದ್ಯಾಟ

Update: 2026-01-02 15:37 IST

ಮಂಗಳೂರು, ಜ.2: ರಾಜಕೇಸರಿ ಸೇವಾ ಟ್ರಸ್ಟ್ ಮಂಗಳೂರು ಸಂಸ್ಥೆಯ ಸೇವಾ ಚಟುವಟಿಕೆಗಳ ಸಹಾಯಾರ್ಥವಾಗಿ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಜ.4ರಂದು ನಗರದ ನೆಹರೂ ಮೈದಾನದಲ್ಲಿ, ಸಮಾಜದ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೃತ್ತಿಪರರ ನಡುವೆ ಒಂದು ದಿನದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ.

ರಿಕ್ಷಾ ಚಾಲಕರು, ಖಾಸಗಿ ಬಸ್ ನೌಕರರು, ಬೀದಿಬದಿ ವ್ಯಾಪಾರಿಗಳ ಸಹಿತ ಸಮಾಜದ 8 ವಿವಿಧ ಶ್ರಮಿಕ ವರ್ಗಗಳ ನಡುವೆ ಪಂದ್ಯಾಟ ನಡೆಯಲಿದೆ. ಬೆಳಿಗ್ಗೆ 8ಕ್ಕೆ ಮಹಿಳಾ ಕಬಡ್ಡಿ ವಿಶ್ವಕಪ್ ಪಂದ್ಯಾಟದ ವಿಜೇತ ಭಾರತ ತಂಡದ ಸದಸ್ಯೆ ಧನಲಕ್ಷ್ಮಿ ಪೂಜಾರಿ ಪಂದ್ಯಾಟ ಉದ್ಘಾಟಿಸುವರು. ಸ್ಪೀಕರ್ ಯು.ಟಿ.ಖಾದರ್, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪಂದ್ಯಾಟದ ವಿಜೇತರಿಗೆ ಟ್ರೋಫಿ ಮತ್ತು ನಗದು ಬಹುಮಾನ ಹಸ್ತಾಂತರಿಸಲಾಗುವುದು ಎಂದು ಟ್ರಸ್ಟ್‌ನ ಜಿಲ್ಲಾಧ್ಯಕ್ಷ ಸಂತೋಷ್ ಕೊಲ್ಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ವೇಳೆ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಶಿಬಿರ, ವಿವಿಧ ಇಲಾಖೆಯ ಮಳಿಗೆಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆಗಳನ್ನು ಮಾಡಲಾಗುವುದು. ಕಳೆದ 13 ವರ್ಷಗಳಿಂದ ರಾಜಕೇಸರಿ ಸೇವಾ ಟ್ರಸ್ಟ್ ಅಶಕ್ತರಿಗೆ ಮನೆ ನಿರ್ಮಾಣ, ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು ಹಾಗೂ ಇನ್ನಿತರ 585 ಸೇವಾ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ ಎಂದರು.

ಟ್ರಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಲಾಲ್ ಮಂಗಳಾದೇವಿ, ಕ್ರೀಡಾ ಸಂಚಾಲಕ ಸಂದೀಪ್ ಸಾಲಿಯಾನ್, ಕ್ರೀಡಾ ಸಹ ಸಂಚಾಲಕರಾದ ರತೀಶ್ ರೈ ಎಕ್ಕೂರು, ಚರಣ್ ಶೆಟ್ಟಿ ಮಾಲೆಮಾರ್, ಕ್ರೀಡಾ ಕಾರ್ಯದರ್ಶಿ ಶರತ್‌ಕುಮಾರ್ ಯು. ಉಪಸ್ಥಿತರಿದ್ದರು.

ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಬಡ ಮಕ್ಕಳ ಆರೋಗ್ಯ, ನೈರ್ಮಲ್ಯ ಮತ್ತು ಹಕ್ಕು ಸಂರಕ್ಷಣೆಯ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಎಲ್ಲಾ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಶೌಚಾಲಯಗಳನ್ನು ಸ್ವಯಂಪ್ರೇರಿತ ಶ್ರಮದಾನದ ಮೂಲಕ ಶುಚಿತ್ವ ಮತ್ತು ದುರಸ್ತಿಗೊಳಿಸಿ, ನವೀಕರಿಸಿ ಸ್ವಚ್ಛಾಲಯಗಳನ್ನಾಗಿ ಪರಿವರ್ತಿಸುವ ವಿನೂತನ ಪರಿಕಲ್ಪನೆಯೊಂದಿಗೆ ‘ರಾಜಕೇಸರಿ ಸ್ವಚ್ಚಾಲಯ ಅಭಿಯಾನ’ ಹಮ್ಮಿಕೊಳ್ಳಲಾಗಿದೆ. ಕಳೆದ ಐದು ತಿಂಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ 15 ಶಾಲೆಗಳ ಶೌಚಾಲಯಗಳನ್ನು ಸಂಸ್ಥೆಯ ವತಿಯಿಂದ ಸದಸ್ಯರ ನೆರವಿನೊಂದಿಗೆ ಸ್ವಚ್ಛಾಲಯಗಳನ್ನಾಗಿ ಪರಿವರ್ತಿಸಲಾಗಿದೆ. ಮುಂದಿನ ಹಂತದಲ್ಲಿ 15 ಶಾಲೆಗಳ ಶೌಚಾಲಯ ದುರಸ್ತಿಗೆ ನಿಧಿ ಸಂಗ್ರಹಕ್ಕಾಗಿ ಕ್ರಿಕೆಟ್ ಪಂದ್ಯಾಟ ನಡೆಸಲಾಗುತ್ತಿದೆ ಎಂದು ಸಂತೋಷ್ ಕೊಲ್ಯ ತಿಳಿಸಿದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News