×
Ad

ರಾಜ್ಯ ಸರಕಾರದಿಂದ ದುರಾಡಳಿತ: ಜೆಡಿಎಸ್ ಆರೋಪ

Update: 2025-11-20 19:45 IST

ಮಂಗಳೂರು: ರಾಜ್ಯ ಸರಕಾರ ಇಚ್ಛಾಶಕ್ತಿಯಿಲ್ಲದೆ ಆಡಳಿತ ನಡೆಸುತ್ತಿದೆ. ಅದರ ದುರಾಡಳಿತದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಆರೋಪಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇವೇಗೌಡ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಆಡಳಿತದ ದೃಷ್ಟಿಕೋನವನ್ನೇ ಬದಲಿಸಿದ್ದರು. ಕುಮಾರಸ್ವಾಮಿ ತನ್ನ ಅವಧಿಯಲ್ಲಿ ಗ್ರಾಮದರ್ಶನ, ಜನತಾದರ್ಶನದಂಥ ಕಾರ್ಯಕ್ರಮದ ಮೂಲಕ ಜನರೊಂದಿಗೆ ಬೆರೆತು ಸಮಸ್ಯೆಗಳನ್ನು ಹತ್ತಿರದಿಂದ ಅರಿತಿದ್ದರು. ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಮಹತ್ವ ನೀಡುವ ನಿಟ್ಟಿನಲ್ಲಿ ಕೆಪಿಎಸ್ ಯೋಜನೆ ಜಾರಿಗೆ ತಂದಿದ್ದರು. ಆದರೆ ಹಾಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮೆಚ್ಚಿಸಲು ಆಡಳಿತ ನಡೆಸುತ್ತಿದೆ ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಆರ್ಥಿಕ ಸಮಸ್ಯೆಯಿಂದಾಗಿ ದಾಖಲಾತಿ ಕಡಿಮೆಯಾಗಿದೆ. ಹಲವು ವಿಭಾಗಗಳು ಮುಚ್ಚಿ ಹೋಗುತ್ತಿದೆ. ಕೆಂಪುಕಲ್ಲು, ಮರಳು ಕೊರತೆಯಿಂದಾಗಿ ಕೂಲಿ ಕಾರ್ಮಿಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಸಣ್ಣ ಸಮಸ್ಯೆಯನ್ನೂ ಬಗೆಹರಿಸಲಾಗದ ಜಿಲ್ಲಾಡಳಿತದ ಬಗ್ಗೆ ಮರುಕವಿದೆ. ಜಿಲ್ಲೆಯಲ್ಲಿ ಶಿಷ್ಟಾಚಾರ ಪಾಲನೆಯೂ ಆಗುತ್ತಿಲ್ಲ, ಅಧಿಕಾರಿಗೆ ಕರೆ ಮಾಡಿದರೆ ಉಸ್ತುವಾರಿ ಸಚಿವರಲ್ಲಿ ಮಾತನಾಡಬೇಕು ಎನ್ನುತ್ತಾರೆ. ತಾಲೂಕು, ಜಿಲ್ಲಾ ಪಂಚಾಯತ್ ಜನಪ್ರತಿನಿಧಿಗಳ ಆಡಳಿತ ಅಸ್ತಿತ್ವದಲ್ಲಿಲ್ಲದ ಕಾರಣ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಎಂ.ಬಿ. ಸದಾಶಿವ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಮುಹಮ್ಮದ್ ಕುಂಞಿ, ವಸಂತ ಪೂಜಾರಿ, ಹೈದರ್ ಪರ್ತಿಪ್ಪಾಡಿ, ಪ್ರವೀಣ್‌ಚಂದ್ರ ಜೈನ್, ಇಕ್ಬಾಲ್ ಮೂಲ್ಕಿ, ಅಕ್ಷಿತ್ ಸುವರ್ಣ, ಕನಕದಾಸ, ವಿನ್ಸೆಂಟ್ ಪಿರೇರಾ, ರಿತಿಶ್ ಕರ್ಕೇರ ಮತ್ತಿತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News