×
Ad

ಜು.25: ದ.ಕ. ಜಿಲ್ಲೆಯಲ್ಲಿ ಭಾರೀ ಮಳೆಯ ನಿರೀಕ್ಷೆ: ರೆಡ್ ಅಲರ್ಟ್ ಘೋಷಣೆ

Update: 2025-07-24 21:15 IST

ಮಂಗಳೂರು, ಜು.24: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮಳೆ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಶುಕ್ರವಾರವೂ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ.

ಮಳೆಯಿಂದಾಗಿ ಹಲವು ಕಡೆಯಲ್ಲಿ ಗುಡ್ಡ ಕುಸಿತವಾಗಿ ಸಂಚಾರದಲ್ಲಿ ವ್ಯತ್ಯಯ ಕಾಣಿಸಿಕೊಂಡಿತ್ತು. ಗುರುವಾರ ಬೆಳಗ್ಗೆಯಿಂದಲ್ಲೇ ಮಳೆ ಕಾಣಿಸಿಕೊಂಡಿದ್ದು, ಬಿಟ್ಟು ಬಿಡದೇ ಸಾಧಾರಣದಿಂದ ಉತ್ತಮ ಮಳೆ ನಗರ ಭಾಗ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸುರಿದಿದೆ.

*ಮುಂಗಾರು ಮಳೆ ಮತ್ತಷ್ಟು ವೇಗ : ಕಳೆದ ಕೆಲವು ದಿನಗಳಿಂದ ಸಾಧಾರಣಕ್ಕಿಂತ ಉತ್ತಮ ಮಳೆಯಾಗುತ್ತಿದ್ದು, ಈಗ ಮುಂಗಾರು ಮಳೆ ಮತ್ತಷ್ಟು ವೇಗವನ್ನು ಪಡೆಯುವ ಸಾಧ್ಯತೆಯಿದ್ದು,ಜು.28ರ ಬಳಿಕ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ.

ಗುರುವಾರ ಮಂಗಳೂರು ಭಾಗದಲ್ಲಿ ಸಾಧಾರಣದಿಂದ ಉತ್ತಮ ಮಳೆ ದಿನವಿಡೀ ಸುರಿದಿದೆ. ಜಿಲ್ಲೆಯ ಗ್ರಾಮಾಂತರ ಭಾಗದಲ್ಲೂ ಉತ್ತಮ ಮಳೆಯಾಗಿದ್ದು, ಹಾನಿಯ ಪ್ರಮಾಣ ಕಡಿಮೆಯಿದ್ದು, ಮಳೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಶಾಲೆ, ಪಿಯು ಕಾಲೇಜುಗಳಿಗೆ ರಜೆ : ಮಳೆಯ ಕಾರಣದಿಂದಾಗಿ ಜಿಲ್ಲೆಯಲ್ಲಿ ಕಡಬ, ಪುತ್ತೂರು, ಮಂಗಳೂರು, ಮುಲ್ಕಿ, ಮೂಡುಬಿದಿರೆ, ಉಳ್ಳಾಲ, ಬಂಟ್ವಾಳ ಭಾಗದ ಎಲ್ಲ ಅಂಗನವಾಡಿ, ಸರ್ಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

*ಮೀನುಗಾರರಿಗೆ ಎಚ್ಚರಿಕೆ: ಭಾರತೀಯ ಹವಾಮಾನ ಇಲಾಖೆ ನೀಡಿದ ಸೂಚನೆಯಂತೆ ಜು.26ರ ವರೆಗೆ ಅರಬ್ಬಿ ಸಮುದ್ರದಲ್ಲಿ ಮಳೆ ಮತ್ತು ಭಾರೀ ಗಾಳಿ ಬೀಸುವುದರಿಂದ ಕಡಲು ಪ್ರಕ್ಷುಬ್ದವಾಗಿರುತ್ತದೆ ಈ ಕಾರಣದಿಂದ ನಾಡದೋಣಿ ಮೀನುಗಾರರು ಸೇರಿದಂತೆ ಯಾರು ಕೂಡ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳದಂತೆ ಮೀನುಗಾರಿಕಾ ಇಲಾಖೆ ಸೂಚನೆ ನೀಡಿದೆ.

*ಮೂಡಬಿದ್ರೆಯಲ್ಲಿ ಗರಿಷ್ಠ ಮಳೆ: ದ.ಕ. ಜಿಲ್ಲೆಯಲ್ಲಿ 24 ಗಂಟೆಯಲ್ಲಿ 55 ಮಿ.ಮೀ ಮಳೆ ಬಿದ್ದಿದೆ.

ದ.ಕ. ಜಿಲ್ಲೆಯಲ್ಲಿ ಗರಿಷ್ಠ ಮೂಡಬಿದ್ರೆಯಲ್ಲಿ 70.4 ಮಿ.ಮೀ ಮಳೆಯಾಗಿದೆ. ಬೆಳ್ತಂಗಡಿ 54.7, ಬಂಟ್ವಾಳದಲ್ಲಿ 62.5, ಮಂಗಳೂರು 63.4, ಪುತ್ತೂರು 42.9, ಸುಳ್ಯ 41.5, ಮೂಡುಬಿದಿರೆ 70.4, ಕಡಬ 57.5, ಮೂಲ್ಕಿ 26.6, ಉಳ್ಳಾಲ 62.8, ಉಳ್ಳಾಲ 63.8 ಮಿ.ಮೀ. ಮಳೆಯಾಗಿದೆ

ದಕ್ಷಿಣ ಕನ್ನಡದಲ್ಲಿ ಶಾಲೆ, ಪ.ಪೂ ಕಾಲೇಜುಗಳಿಗೆ ರಜೆ: ಕಳೆದ 24 ಗಂಟೆಗಳಲ್ಲಿ ದ.ಕ. ಜಿಲ್ಲೆಯಲ್ಲಿ ಹೆಚ್ಚಿನ ಮಳೆ ದಾಖಲಾಗಿರುವ ಹಿನ್ನೆಲೆಯಲ್ಲಿ ಐಎಂಡಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ,ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು, ಸರಕಾರಿ, ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ಜು.25ರಂದು ದ.ಕ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ದರ್ಶನ್ ಎಚ್.ವಿ. ಅವರು ರಜೆ ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News