ಆ.23ರಂದು ಕೆಸಿಸಿಐಯಿಂದ ‘ಬ್ರಾಂಡ್ ಮಂಗಳೂರು’ ಯೋಜನೆ ಅನಾವರಣ
ಮಂಗಳೂರು, ಆ.19: ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು (ಕೆಸಿಸಿಐ) ಮಂಗಳೂರನ್ನು ಜಾಗತಿಕವಾಗಿ ಬ್ರಾಂಡ್ ಆಗಿ ರೂಪಿಸಲು ಬಹು ಹಂತದ ಯೋಜನೆಗಳನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದ ಭಾಗವಾಗಿ ಆ. 20 ರಂದು ಸಂಜೆ 3 ಗಂಟೆಗೆ ನಗರದ ಬಂದರ್‌ನಲ್ಲಿರುವ ಸಂಸ್ಥೆಯ ಸಭಾಂಗಣದಲ್ಲಿ ಸಮಾಲೋಚನಾ ಸಭೆ ಮತ್ತು 23 ರಂದು ಹೊಟೇಲ್ ಅವತಾರ್‌ನಲ್ಲಿ ಸಂಜೆ 5 ಗಂಟೆಗೆ ಯೋಜನೆ ಅನಾವರಣ ನಡೆಯಲಿದೆ.
ಯೋಜನೆ ಅನಾವರಣ ಸಮಾರಂಭದಲ್ಲಿ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರಋ್ ಮತ್ತು ಲೋಕಸಭಾ ಸದಸ್ಯ ಕ್ಯಾ.ಬ್ರಿಜೇಶ್ ಚೌಟ ಭಾಗವಹಿಸಲಿದ್ದಾರೆ. ಜಾಗತಿಕ ಭೂಪಟದಲ್ಲಿ ಮಂಗಳೂರು ನಗರಕ್ಕೆ ಮನ್ನಣೆ ಒದಗಿಸುವುದು ಒಟ್ಟು ಯೋಜನೆ ಉದ್ದೇಶ ಎಂದು ಕೆಸಿಸಿಐ ಅಧ್ಯಕ್ಷ ಆನಂದ್ ಜಿ.ಪೈ ಅವರು ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಂಗಳೂರು ಬ್ರಾಂಡ್ ರೂಪಿಸಲು ಪ್ರಥಮ ಹಂತದಲ್ಲಿ ಪಾಡ್‌ಕಾಸ್ಟ್ ಸರಣಿ ರೂಪಿಸಲಾಗುತ್ತಿದೆ. ಇದು ಡಿಜಿಟಲ್ ಆಡಿಯೋ ಫೈಲ್‌ಗಳನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡುವ ಒಂದು ಮಾಧ್ಯಮವಾಗಿದೆ. ಈ ಸರಣಿಯು ಉದ್ಯಮಿ ಗಳು, ವೃತ್ತಿಪರರು, ಕಲಾವಿದರು ಮತ್ತು ಸಮುದಾಯ ನಾಯಕರೊಂದಿಗೆ ಆಕರ್ಷಕ ಸಂಭಾಷಣೆಗಳನ್ನು ಒಳ ಗೊಂಡಿರುತ್ತದೆ. ಪ್ರತಿಯೊಂದು ಸಂಚಿಕೆಯು ವ್ಯವಹಾರ ಮತ್ತು ತಂತ್ರಜ್ಞಾನದಿಂದ ಆಹಾರ, ಸಂಸ್ಕೃತಿ, ಕ್ರೀಡೆ ಮತ್ತು ಪರಂಪರೆಯವರೆಗೆ ನಗರದ ವಿವಿಧ ಅಂಶಗಳ ಕುರಿತು ಗಮನ ಸೆಳೆಯಲ್ಲಿದೆ. ಪ್ರವಾಸೋದ್ಯಮ ಅವಕಾಶ ಕುರಿತು ಆಕರ್ಷಕ ಕರಪತ್ರ, ಹೋಂ ಸ್ಟೇ ಸೌಲಭ್ಯ ವರ್ಧನೆ ಮುಂತಾದ ಕ್ರಮಗಳನ್ನು ಇದು ಒಳಗೊಂಡಿದೆ ಎಂದು ಅವರು ವಿವರಿಸಿದರು.
ಅಧಿಕೃತ ಮತ್ತು ಆರಾಮದಾಯಕ ಪ್ರಯಾಣದ ಅನುಭವಗಳಿಗೆ ಹೆಚ್ಚುತ್ತಿರುವ ಬೇಡಿಕೆ ಗುರುತಿಸಿ, ಕೆಸಿಸಿಐ ನಗರದ ಹೋಂಸ್ಟೇ ವಲಯವನ್ನು ಅಭಿವೃದ್ಧಿಪಡಿಸಲು ಯೋಜಿಸಿದೆ. ಅತಿಥಿ ಸೇವೆಗಳನ್ನು ಸುಧಾರಿಸುವುದು, ಗುಣಮಟ್ಟದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಮತ್ತು ಅಂತಾರಾಷ್ಟ್ರೀಯ ಆತಿಥ್ಯ ಮಾನದಂಡಗಳನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆಸಿಸಿಐ ಉಪಾಧ್ಯಕ್ಷ ಪಿ.ಬಿ.ಅಹ್ಮದ್ ಮುದಸ್ಸರ್, ಕಾರ್ಯದರ್ಶಿ ಅಶ್ವಿನ್ ಪೈ ಮಾರೂರು, ನಿರ್ದೇಶಕ ಸುಜೀರ್ ಪ್ರಸಾದ್ ನಾಯಕ್, ಬ್ರಾಂಡ್ ಮಂಗಳೂರು ಯೋಜನೆಯ ನಿರ್ದೇಶಕಿ ಎಂ.ಆತ್ಮಿಕಾ ಅಮೀನ್ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈತ್ರೇಯ ಎ. ಉಪಸ್ಥಿತರಿದ್ದರು.