×
Ad

ಕೆಂಜಾರು ಮೂಡುಬಾಳಿಕೆ : ಕೋಸ್ಟ್ ಗಾರ್ಡ್‌ನಿಂದ ಕಂಪೌಂಡ್ ನಿರ್ಮಾಣ

► ಪರಿಶಿಷ್ಟ ಜಾತಿಯ 10 ಕುಟುಂಬಗಳಿಗೆ ದಿಗ್ಬಂಧನ ಭೀತಿ ►ನ್ಯಾಯ ದೊರೆಯದಿದ್ದರೆ ಪ್ರತಿಭಟನೆ ಅನಿವಾರ್ಯ: ದಸಂಸ

Update: 2026-01-20 14:20 IST

ಮಂಗಳೂರು, ಜ.20: ಸುರತ್ಕಲ್ ಹೋಬಳಿ ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರು 3ನೆ ವಾರ್ಡ್‌ನ ಮೂಡುಬಾಳಿಕೆ ಎಂಬಲ್ಲಿ ಕೋಸ್ಟ್ ಗಾರ್ಡ್‌ನಿಂದ ಕಂಪೌಂಡ್ ನಿರ್ಮಾಣ ಕಾಮಗಾರಿಗೆ ಮುಂದಾಗಿದ್ದು, ಇದರಿಂದ ಅಲ್ಲಿನ ಪರಿಶಿಷ್ಟ ಜಾತಿಯ 10 ಕುಟುಂಬಗಳು ರಸ್ತೆ ಇಲ್ಲದೆ ದಿಗ್ಬಂಧನಕ್ಕೊಳಗಾಗುವ ಭೀತಿಯನ್ನು ಎದುರಿಸುತ್ತಿವೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ ಮಾತನಾಡಿ, ಕುಟುಂಬಗಳಿಗೆ ಆಸರೆಯಾಗಿದ್ದ ಏಕ ಮಾತ್ರ ರಸ್ತೆಯನ್ನು ಭಾರತೀಯ ಕೋಸ್ಟ್‌ಗಾರ್ಡ್‌ನವರು ಕಂಪೌಂಡ್ ನಿರ್ಮಾಣಕ್ಕೆ ಮುಂದಾಗಿರುವುದರಿಂದ ದಿನನಿತ್ಯ ಸಂಚಾರಕ್ಕೆ ಈ ಕುಟುಂಬಗಳು ಪರದಾಡುವಂತಾಗಿದೆ. ಈ ಬಗ್ಗೆ ಸಂಘಟನೆಯ ನೇತೃತ್ವದಲ್ಲಿ ಈಗಗಾಲೇ ಸಂಸದರು, ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ನ್ಯಾಯ ದೊರಕದಿದ್ದರೆ ಪ್ರತಿಭಟನೆ ಅನಿವಾರ್ಯವಾಗಲಿ ಎಂದರು.

ಮೂಡುಬಾಳಿಕೆಯಲ್ಲಿ 10 ಪರಿಶಿಷ್ಟ ಜಾತಿಯ ಕುಟುಂಬಗಳು ಸುಮಾರು 70 ವರ್ಷಗಳಿಂದ ವಾಸಿಸುತ್ತಿದ್ದಾರೆ. 1995ರಲ್ಲಿ ಈ ಮನೆಗಳಿಗೆ ಹಕ್ಕು ಪತ್ರ ದೊರಕಿದೆ. ಕುಟುಂಬಗಳು ವಾಸಿಸುತ್ತಿರುವ ಮನೆಗಳ ಸುತ್ತಲೂ ಇರುವ ಜಮೀನು ಖಾಸಗಿಯವರಿಗೆ ಸೇರಿದ್ದಾಗಿದೆ. ಈ ಕುಟುಂಬಗಳು ತಮ್ಮ ದೈನಂದಿನ ಕೆಲಸ ಕಾರ್ಯ, ವಿದ್ಯಾಭ್ಯಾಸ ಹಾಗೂ ಇತರ ವಿಚಾರಗಳಿಗೆ ಹೋಗಲು ಸರ್ವೆ ನಂ. 116/7 ಕ್ಕೆ ತಾಗಿಕೊಂಡಿರುವ ಕಾಲುದಾರಿ ಮತ್ತು ಕಚ್ಚಾ ರಸ್ತೆಯನ್ನು ಅವಲಂಬಿಸಿರುತ್ತಾ. ತಲಾ 2.5 ಸೆಂಟ್ಸ್ ಜಾಗದಲ್ಲಿರುವ ಈ 10 ಕುಟುಂಬಗಳ ಮನೆಗಳವರು ಈ ರಸ್ತೆಗಳಲ್ಲಿಯೇ ತಮ್ಮ ಮನೆಗಳಿಗೆ ಬೇಕಾದ ವಸ್ತುಗಳನ್ನು, ರಿಕ್ಷಾ ಅಥವಾ ಟೆಂಪೋ ಮೂಲಕ ಸಾಗಿಸುತ್ತಿದ್ದಾರೆ. ತುರ್ತು ಸಂರ್ಭಗಗಳಲ್ಲಿ ಹಿರಿಯ ನಾಗರಿಕರು ಅಥವಾ ರೋಗಿಗಳನ್ನು ಸಾಗಿಸಲು ಕುಟುಂಬಗಳಿಗೆ ಇರುವ ಏಕೈಕ ರಸ್ತೆ ಇದಾಗಿದೆ. ಮಳೆಗಾಲದಲ್ಲಿ ನೆರೆ ಬಂದಾಗ ಈ ಪ್ರದೇಶ ಸಂಪೂರ್ಣ ಜಲಾವೃತವಾಗುತ್ತದೆ ಎಂದು ಜಿಲ್ಲಾ ಸಂಘಟನಾ ಸಂಚಾಲಕ ರಘು ಕೆ. ಎಕ್ಕಾರು ವಿವರ ನೀಡಿದರು.

ಈ ವಿಚಾರವನ್ನು ಕೋಸ್ಟ್‌ಗಾರ್ಡ್ ಅಧಿಕಾರಿಗಳು, ಜಿಲ್ಲಾಧಿಕಾರಿ, ತಹಶೀಲ್ದಾರ್, ಪೊಲೀಸ್ ಇಲಾಖೆಯ ಗಮನಕ್ಕೂ ತರಲಾಗಿದೆ. ಆದರೆ ಸ್ಪಂದನೆ ದೊರಕಿಲ್ಲ. ಆದರೆ ಇಲ್ಲಿನ ನಿವಾಸಿಗಳ ವಾಸ್ತವ ಸ್ಥಿತಿಯನ್ನು ಅರಿತುಕೊಂಡು ಕಾಮಗಾರಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿದು ಸ್ಥಳ ಪರಿಶೀಲನೆ ನಡೆಸಿಕೊಂಡು ರಸ್ತೆಯನ್ನು ಬಿಟ್ಟು ಕಂಪೌಂಡ್ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ಈ ಬಗ್ಗೆ ಸಂಬಂಧಟ್ಟವರು ಗಮನ ಹರಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಇಲಾಖೆಗಳ ಎದುರು ಪ್ರತಿಭಟನಾ ಧರಣಿ ನಡೆಸುವುದಾಗಿ ರಘು ಎಕ್ಕಾರು ಎಚ್ಚರಿಸಿದರು.

ಗೋಷ್ಟಿಯಲ್ಲಿ ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ತಾಲೂಕು ಸಂಘಟನಾ ಸಂಚಾಲಕ ರುಕ್ಕಯ್ಯ ಅಮೀನ್ ಕರಂಬಾರು, ಕೆಂಜಾರು ಗ್ರಾಮ ಸಂಚಾಲಕ ಲಿಂಗಪ್ಪ ಕುಂದರ್, ಸ್ಥಳೀಯ ನಿವಾಸಿ ಯಮುನಾ ಉಪಸ್ಥಿತರಿದ್ದರು.

ಸಂಸದ, ಶಾಸಕರಿಂದ ಸಿಗದ ಸ್ಪಂದನೆ :

ಮಂಗಳೂರಿನ ಈಗಿನ ಸಂಸದರು ವಿದ್ಯಾವಂತರಲ್ಲದೆ, ಪ್ರಜ್ಞಾವಂತರೆಂಬ ವಿಶ್ವಾಸ ಹಾಗೂ ಅವರ ಮೇಲೆ ಅಪಾರ ಗೌರವ ನಮಗಿತ್ತು. ಹಾಗಾಗಿ ಅವರಲ್ಲಿ ಈ ಬಗ್ಗೆ ಮನವಿ ಸಲ್ಲಿಸಲು ಹೋದಾಗ ಅವರು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಲ್ಲದೆ ಸೌಜನ್ಯಕ್ಕಾದರೂ ಮನವಿಯನ್ನು ಸ್ವೀಕರಿಸದೆ ನೋವುಂಟುಮಾಡಿದ್ದಾರೆ. ಕೋಸ್ಟ್ ಗಾರ್ಡ್ ಕೇಂದ್ರ ಸರಕಾರ ವ್ಯಾಪ್ತಿಗೆ ಬರುವ ಕಾರಣ ಸರಕಾರದ ಜನಪ್ರತಿನಿಧಿಯಾಗಿರುವ ಸಂಸದರೇ ಈ ರೀತಿಯಾಗಿ ವರ್ತಿಸಿದರೆ ನಮಗಾಗುತ್ತಿರುವ ಅನ್ಯಾಯವನ್ನು ನಾವು ಯಾರಲ್ಲಿ ಹೇಳಬೇಕು. ಸ್ಥಳೀಯ ಶಾಸಕರಿಗೂ ಮನವಿ ಸಲ್ಲಿಸಿದ್ದು, ಅವರೂ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಾನಂದ ಡಿ. ಬೇಸರ ತೋಡಿಕೊಂಡರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News