×
Ad

PUTTUR | 106 ಕೆಜಿ ಗಾಂಜಾ ವಶ: ಇಬ್ಬರು ಆರೋಪಿಗಳ ಬಂಧನ

ಎರಡು ವಾಹನಗಳಲ್ಲಿ 53 ಲಕ್ಷ ರೂ. ಮೌಲ್ಯದ 73 ಕಟ್ಟು ಮಾದಕ ವಸ್ತು ಪತ್ತೆ

Update: 2026-01-20 13:09 IST

ಪುತ್ತೂರು: ಎರಡು ವಾಹನಗಳಲ್ಲಿ ಸಾಗಿಸುತ್ತಿದ್ದ 106 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿರುವ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಳ್ತಂಗಡಿ, ಚಾರ್ಮಾಡಿ ಗ್ರಾಮದ ನಿವಾಸಿಗಳಾದ ರಫೀಕ್ ಪಿ.(37) ಮತ್ತು ಅಬ್ದುಲ್ ಸಾದಿಕ್ (37) ಬಂಧಿತ ಆರೋಪಿಗಳು. ಇವರಿಗೆ ಸೇರಿದ ಎರಡು ವಾಹನಗಳಿಂದ 106 ಕೆಜಿ ಮತ್ತು 160 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಮೌಲ್ಯ 53.03 ಲಕ್ಷ ರೂ. ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ.

 

ಕಾರು ಮತ್ತು ಗೂಡ್ಸ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯನ್ನು ಆಧರಿಸಿ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಜ.19ರಂದು ಸಂಜೆ ಪಡುವನ್ನೂರು ಗ್ರಾಮದ ಸಜಂಕಾಡಿ ಎಂಬಲ್ಲಿ ವಾಹನ ತಪಾಸಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ರಫೀಕ್ ಪಿ. ಚಲಾಯಿಸುತ್ತಿದ್ದ ಕಾರಿನಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಸುಮಾರು 100 ಗ್ರಾಂ ತೂಕವಿರುವ ಗಾಂಜಾ ಗಿಡದ ಎಲೆಗಳಂತೆ ಇದ್ದ ಸೊಪ್ಪು, ಹೂ, ಕಾಯಿಗಳಿದ್ದ ಕಟ್ಟುಗಳು ಪತ್ತೆಯಾಗಿವೆ. ಸಾದಿಕ್ ಚಲಾಯಿಸುತ್ತಿದ್ದ ಗೂಡ್ಸ್ ವಾಹನವನ್ನು ಪರಿಶೀಲಿಸಿದಾಗ 106 ಕೆಜಿ, 60 ಗ್ರಾಂ ತೂಕದ ಒಟ್ಟು 73 ಕಟ್ಟು ಗಾಂಜಾ ಪತ್ತೆಯಾಗಿದೆ. ಅವುಗಳ ಒಟ್ಟು ಅಂದಾಜು ಮೌಲ್ಯ 53,03,000 ರೂ. ಎಂದು ಎಸ್ಪಿ ತಿಳಿಸಿದ್ದಾರೆ.

ಈ ಬಗ್ಗೆ ಆರೋಪಿಗಳನ್ನು ವಿಚಾರಿಸಿದಾಗ ಗಾಂಜಾ ಸೊಪ್ಪುಗಳನ್ನು ಕೇರಳ ಹಾಗೂ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಕೊಂಡೊಯ್ಯುತ್ತಿರುವುದಾಗಿ ತಿಳಿಸಿದ್ದಾರೆ. ಸಾಗಾಟಕ್ಕೆ ಬಳಸಿರುವ ವಾಹನಗಳನ್ನು ಹಾಗೂ ಆರೋಪಿಗಳ ಬಳಿಯಿದ್ದ ಎರಡು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿರುತ್ತದೆ.

ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ:09/2026, ಕಲಂ: 8(c), 20(b)(ii)C NDPS Act-1985ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಗುಣಪಾಲ ಜೆ., ಸಿಬ್ಬಂದಿಯಾದ ಹರೀಶ್, ಹರ್ಷಿತ್, ಪ್ರಶಾಂತ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಭವಿತ್ ರೈ, ನಾಗರಾಜ್, ಸತೀಶ್, ರಮೇಶ್, ಸುಬ್ರಮಣಿ, ವಿನೋದ್ ರನ್ನು ಒಳಗೊಂಡ ತಂಡ ಕಾರ್ಯನಿರ್ವಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News