×
Ad

ಕೈಕಂಬ: ಗ್ರಾಮಕರಣಿಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಗ್ರಾಮಸ್ಥರು

Update: 2026-01-19 22:39 IST

ಕೈಕಂಬ: ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಯೊಬ್ಬರಿಗೆ 2018ರಲ್ಲಿ ನಕಲಿ ಹಕ್ಕು ಪತ್ರ ನೀಡಲಾಗಿದೆ‌ ಎಂಬ ಆರೋಪ ಸಂಬಂಧ ಗ್ರಾಮಕರಣೀಕರು ಕಚೇರಿಯ ಸಿಬ್ಬಂದಿಯನ್ನು ಹೊರಗೆ ಹಾಕಿ ಬೀಗ ಜಡಿದಿರುವ ಘಟನೆ ವರದಿಯಾಗಿದ್ದು, ಇದರಿಂದ ಆಘಾತಕ್ಕೊಳಗಾದ ಸಿಬ್ಬಂದಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದು, ಇದನ್ನರಿತ ಗ್ರಾಮಸ್ಥರು ಏಕಾಏಕಿ ಗ್ರಾಮಕರಣಿಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಸೋಮವಾರ ಬೆಳಗ್ಗೆ ವರದಿಯಾಗಿದೆ.

2018ರಲ್ಲಿ ಸ್ಥಳೀಯರೊಬ್ಬರಿಗೆ ನಕಲಿ ಹಕ್ಕು ಪತ್ರ ನೀಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಕಚೆರಿಗೆ ಬಂದ ಗ್ರಾಮಕರಣಿಕರ ಮುತ್ತಪ್ಪ ಅವರು ಕಚೇರಿಯಲ್ಲಿದ್ದ ಸಿಬ್ಬಂದಿ ರಜನಿ ಅವರನ್ನು‌ ಕಚೇರಿಯಿಂದ ಹೊರ ಕಳುಹಿಸಿ ಬೀಗ ಜಡಿದಿದ್ದರು.

ನಕಲಿ ಹಕ್ಕುಪತ್ರ ಪ್ರಕರಣದಲ್ಲಿ ನನ್ನನ್ನು ಬಲಿ ಪಶುಮಾಡಲಾಗುತ್ತಿದೆ ಎಂದು ಆತಂಕಕ್ಕೀಡಾದ ರಜನಿ ಅವರು ಕುಸಿದು ಬಿದ್ದು ಅಸ್ವಸ್ಥರಾದರು. ಈ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಗ್ರಾಮಕರಣಿಕರರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ‌ ನಡೆಸಿದರು. ನಕಲಿ ಹಕ್ಕು ಪತ್ರ ವಿತರಣಾ ಹಗರಣದಲ್ಲಿ ಮುಚ್ಚಿ ಹಾಕುವ ಹುನ್ನಾರ ನಡೆಸಲಾಗುತ್ತಿದ್ದು, ಈ ಕುರಿತಾಗಿ ಶೀಘ್ರ ಸೂಕ್ತ ರೀತಿಯಲ್ಲಿ ತನಿಖೆ‌ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು‌ ಆಗ್ರಹಿಸಿದರು.

ಗ್ರಾಮಸ್ಥರ ಪ್ರತಿಭಟನೆಯ ಮಾಹಿತಿ ತಿಳಿದು ಸ್ಥಳಕ್ಕೆ‌ಬಂದ‌ ಗುರುಪುರ ಹೋಬಳಿ ಉಪ ತಹಶೀಲ್ದಾರ್ ಸ್ಟೀಪನ್, ಕಂದಾಯ ನಿರೀಕ್ಷಕ ಪೂರ್ಣಚಂದ್ರ, ಗ್ರಾಮಕರಣಿಕರ ಮುತ್ತಪ್ಪ ಅವರ ಜೊತೆ ತೀವ್ರ ವಾಗ್ವಾದ ನಡೆಸಿದರು. ನಕಲಿ ಹಕ್ಕು ಪತ್ರ ಪ್ರಕರಣ ಮುಚ್ಚಿ ಹಾಕಲು ಗ್ರಾಮಕರಣಿಕರರಿಗೆ ಒತ್ತಡ ಇದ್ದು, ಇದೇ ಕಾರಣಕ್ಕಾಗಿ ಸಿಬ್ಬಂದಿಯನ್ನು ಕಚೇರಿಯಿಂದ ಹೊರಕಳುಹಿಸಿದ್ದಾರೆ ಎಂದು ಆಕ್ರೋಶ‌ ವ್ಯಕ್ತ ಪಡಿಸಿ ಗ್ರಾಮಕರಣಿಕರ ಮುತ್ತಪ್ಪ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಈ ವೇಳೆ ಆಕ್ರೋಶಿತ ಗ್ರಾಮಸ್ಥರನ್ನು ಸಮಾಧಾನ‌ಪಡಿಸಿ ಮಾತನಾಡಿದ ಉಪ ತಹಶೀಲ್ದಾರ್ ಸ್ಟೀಪನ್ ಅವರು, ನಕಲಿ ಹಕ್ಕುಪತ್ರದ ಕುರಿತಂತೆ ಈಗಾಗಲೇ ತನಿಖೆ ಪ್ರಾರಂಭ ಮಾಡಿದ್ದೇವೆ. ಸಿಬ್ಬಂದಿ ಮತ್ತು ಗ್ರಾಮಕರಣಿಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿರಬಹುದು. ಈ ಹಿನ್ನೆಲೆಯಲ್ಲಿ ಈ ಘಟನೆ‌ ನಡೆದಿರಬಹುದು. ಈ ಸಮಸ್ಯೆಯನ್ನು ಶೀಘ್ರ ಪರಿಹರಿಸುಲಾಗುವುದು ಎಂದು ಭರವಸೆ‌ ನೀಡಿದರು. ಅವರ ಭರವಸೆ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದುಕೊಂಡರು.

ಪ್ರತಿಭಟನೆಯಲ್ಲಿ ಕುಪ್ಪೆಪದವು ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು. ಬಜಪೆ ಪೊಲೀಸರು ಸ್ಥಳದಲ್ಲಿ ಹಾಜರಿದ್ದು ಭದ್ರತೆ ಒದಗಿಸಿದರು.

"ನಕಲಿ ಹಕ್ಕುಪತ್ರದ ಬಗ್ಗೆ ತನಿಖೆಯಾಗಬೇಕು. ಈ ಬಗ್ಗೆ ಈಗಾಗಲೇ ಶಾಸಕರ ಗಮನಕ್ಕೆ ತರಲಾಗಿದೆ. ಪಂಚಾಯತ್ ಸಾಮಾನ್ಯ ಸಭೆಯಲ್ಲಿಯೂ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ರಜನಿಯವರು ಆತ್ಮಹತ್ಯೆ ಮಾಡುವ ಬಗ್ಗೆ ನಮಗೆ ಮೊಬೈಲ್ ಕರೆ ಮೂಲಕ ತಿಳಿಸಿದ ಮೇರೆಗೆ ನಾವು ಸ್ಥಳಕ್ಕೆ ದಾವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪ್ರತಿಭಟನೆ ನಡೆಸಿದ್ದೇವೆ. ಅಧಿಕಾರಿಗಳ ಭರವಸೆ ಮೇರೆಗೆ ಪ್ರತಿಭಟನೆ ನಿಲ್ಲಿಸಿದ್ದೇವೆ. ನಕಲಿ ಹಕ್ಕುಪತ್ರದ ಬಗ್ಗೆ ಸಂಪೂರ್ಣ ತನಿಖೆ ನಡೆಸದಿದ್ದಲ್ಲಿ ಗ್ರಾಮಸ್ಥರು ಮತ್ತೆ ಪ್ರತಿಭಟನೆ ನಡೆಸುಲಿದ್ದೇವೆ".

- ವಿಶ್ವನಾಥ ಪಾಕಜೆ, ಸ್ಥಳೀಯರು

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಣ್ಣೀರಿಟ್ಟ ಸಿಬ್ಬಂದಿ...

ಭರವಸೆ ನೀಡಿ ಪ್ರತಿಭಟನೆಯನ್ನು ನಿಲ್ಲಿಸಿದ ಬಳಿಕ ಅಧಿಕಾರಿಗಳು ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸಿಬ್ಬಂದಿ ರಜನಿ ಅವರ ಆರೋಗ್ಯ ವಿಚಾರಿಸಿದರು. ಈ ವೇಳೆ ರಜನಿ, ‘ತಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ಹೀಗೆ ಆದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಧಿಕಾರಿಗಳ ಸಮ್ಮುಖದಲ್ಲಿ ಕಣ್ಣೀರಿಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News