ಉದಿನೂರು ಮುಹಮ್ಮದ್ ಕುಂಞಿಗೆ ಸನ್ಮಾನ
ಮಂಗಳೂರು : ‘ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ’ ಎಂಬ ಕೃತಿಯನ್ನು ರಚಿಸಿದ ಕಾಸರಗೋಡು-ಕಣ್ಣೂರು ಜಿಲ್ಲೆಯ ಗಡಿಭಾಗದ ಕನ್ನಡ ಬರಹಗಾರ ಉದಿನೂರು ಮುಹಮ್ಮದ್ ಕುಂಞಿ ಅವರಿಗೆ ‘ಕಾಸರಗೋಡು ದಸರಾ ಸಾಧಕ ಸನ್ಮಾನ’ ಪ್ರದಾನ ಮಾಡಲಾಯಿತು.
ಕಾಸರಗೋಡಿನಲ್ಲಿ ಕನ್ನಡ ಸಂಸ್ಕೃತಿಯನ್ನು ಉತ್ತೇಜನಗೊಳಿಸಲು 10 ದಿನಗಳ ಕಾಲ ನುಳ್ಳಿಪಾಡಿಯ ಕನ್ನಡ ಭವನದ ವಾಮನ್ ರಾವ್ ಬೇಕಲ್‌ರ ನೇತೃತ್ವದಲ್ಲಿ ಆಯೋಜಿಸಲ್ಪಟ್ಟ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ -2023’ದ ಅಂಗವಾಗಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪ್ರಾಧ್ಯಾಪಕಿ ಡಾ. ಶೈಲಾ ಕೆ.ಎನ್., ಉಪನ್ಯಾಸಕಿ ಡಾ. ಅನುರಾಧ ಕುರುಂಜಿ ಸುಳ್ಯ ಮಾತನಾಡಿದರು.
ದಸರಾ ಉತ್ಸವ ಸಮಿತಿಯ ಸಹ ಸಂಚಾಲಕ ಹಾಗೂ ಕಾಸರಗೋಡು ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ದುರ‌್ರಹ್ಮಾನ್ ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದರು. ಕಾಸರಗೋಡು ಕನ್ನಡ ಭವನದ ಸ್ಥಾಪಕ ವಾಮನ ರಾವ್ ಬೇಕಲ್ ಸ್ವಾಗತಿಸಿದರು. ವಸಂತ ಕೆರೆಮನೆ ವಂದಿಸಿದರು.