ಲೇಡಿಹಿಲ್ ಅಪಘಾತ ಪ್ರಕರಣ: ಆರೋಪಿ ಕಾರು ಚಾಲಕನ ವೈದ್ಯಕೀಯ ತಪಾಸಣೆ
ಮಂಗಳೂರು, ಅ.19: ನಗರದ ಲೇಡಿಹಿಲ್ ಬಳಿ ಬುಧವಾರ ಅಪರಾಹ್ನ ಸಂಭವಿಸಿದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಸಂಚಾರ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಆರೋಪಿ ಚಾಲಕ ಕಮಲೇಶ್ ಬಲದೇವ್‌ನ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಆತ ಮದ್ಯ ಸೇವನೆ ಮಾಡಿರುವುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ. ಇನ್ನು ಕಾರಿನ ಇಂಜಿನ್ ಓವರ್ ಹೀಟ್ ಆಗಿ ನಿಯಂತ್ರಣ ತಪ್ಪಿರುವುದಾಗಿ ಆರೋಪಿ ಕಾರು ಚಾಲಕ ವಿಚಾರಣೆಯ ವೇಳೆ ತಿಳಿಸಿದ್ದಾನೆ. ಹಾಗಾಗಿ ಕಾರಿನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆಯೇ ಎಂಬುದರ ಬಗ್ಗೆಯೂ ತಂತ್ರಜ್ಞರಿಂದ ಪರಿಶೀಲನೆ ನಡೆಸಲಾಗು ವುದು ಎಂದು ತಿಳಿಸಿದ್ದಾರೆ.
ಲೇಡಿಹಿಲ್ ಬಳಿ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಕಮಲೇಶ್ ಬಲದೇವ್ ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿತ್ತು. ಇದರಿಂದ ಸುರತ್ಕಲ್ ಸಮೀಪದ ಕಾನ ಬಾಳ ಬಳಿಯ ನಿವಾಸಿ ರೂಪಶ್ರೀ (23) ಸ್ಥಳದಲ್ಲೇ ಸಾವಿಗೀಡಾದರೆ, ಇತರ ನಾಲ್ಕು ಮಂದಿ ಯುವತಿಯರು ಗಾಯಗೊಂಡಿದ್ದರು.
ಘಟನೆ ನಡೆದ ಬಳಿಕವೂ ಆರೋಪಿ ಕಾರು ಚಾಲಕ ಕಮಲೇಶ್ ಬಲದೇವ್ ಕಾರನ್ನು ನಿಲ್ಲಿಸದರೆ ಯದ್ವಾತದ್ವ ಚಲಾಯಿಸಿದ್ದು, ಬಳಿಕ ಆತ ಪೊಲೀಸ್ ಠಾಣೆಗೆ ಶರಣಾಗಿದ್ದ. ಅಪಘಾತದ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿತ್ತು.