×
Ad

ಪ್ರವಾದಿ ಮುಹಮ್ಮದ್‌ ಅವರ ಆಶಯದಂತೆ ಮನುಕುಲದ ಏಳಿಗೆಗೆ ಶ್ರಮಿಸೋಣ: ಡಾ. ಜಯಬಸವಾನಂದ ಸ್ವಾಮೀಜಿ

ಯುನಿವೆಫ್‌ನ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನ ಸಮಾರೋಪ

Update: 2026-01-02 22:48 IST

ಮಂಗಳೂರು: ಶೈಕ್ಷಣಿಕವಾಗಿ ಮುಂದುವರಿದಿರದ ಆ ಕಾಲದಲ್ಲಿ ಸಾಮಾಜಿಕ ಕ್ರಾಂತಿಯನ್ನು ಸೃಷ್ಟಿಸಿದ್ದ ಪ್ರವಾದಿ ಮುಹಮ್ಮದ್‌ ಅವರ ಆಶಯದಂತೆ ಮನುಕುಲದ ಏಳಿಗೆಗೆ ಶ್ರಮಿಸೋಣ ಎಂದು ಚಿಕ್ಕಮಗಳೂರಿನ ವಿಶ್ವಧರ್ಮ ಪೀಠ ಜಯಬಸವಾನಂದ ತಪೋವನದ ಡಾ. ಜಯಬಸವಾನಂದ ಸ್ವಾಮೀಜಿ ಕರೆ ನೀಡಿದರು.

ಯುನಿವೆಫ್ ಕರ್ನಾಟಕವು ಆರಂಭಿಸಿದ್ದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಗೈದರು.


ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ ಎಂಬ ಕೇಂದ್ರೀಯ ವಿಷಯದಲ್ಲಿ ಶುಕ್ರವಾರ ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರವಾದಿ ಉತ್ತಮ ಆಡಳಿತಗಾರರಾಗಿದ್ದರು. ಸಾಮಾನ್ಯರಲ್ಲಿ ಅತಿ ಸಾಮಾನ್ಯರಂತೆ ಬದುಕಿದ್ದರು. ಅವರು ಸದಾ ಜಗತ್ತಿಗೆ ಶಾಂತಿಯನ್ನು ಬೋಧಿಸಿದರು. ಮಹಿಳೆಯರಿಗೆ ಸಮಾನ ಸ್ಥಾನಮಾನ ಕೊಟ್ಟಿದ್ದರು. ಮದ್ಯ ಮುಕ್ತ, ಜೂಜು ಮುಕ್ತ, ಬಡ್ಡಿ ರಹಿತ, ಅಪರಾಧ ಮುಕ್ತ ಸಮಾಜವನ್ನು ನಿರ್ಮಿಸಿದ್ದರು. ತಾನು ನುಡಿದಂತೆ ಬದುಕಿನಲ್ಲಿ ಪಾಲಿಸುತ್ತಿದ್ದರು. ಆದರೆ ಈವತ್ತು ಅಂತಹ ಕ್ರಾಂತಿಕಾರಿ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇವೆಲ್ಲದರ ಮಧ್ಯೆ ಪ್ರವಾದಿಯ ನಿಂದನೆ, ಡಾ. ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿಯ ತತ್ವ ಆದರ್ಶವನ್ನು ಒಪ್ಪದಿರುವ ಗುಂಪು ಹುಟ್ಟಿಕೊಂಡಿರುವುದು ವಿಷಾದನೀಯ. ಈ ಬಗ್ಗೆ ಸಮಾಜ ಜಾಗೃತರಾಗಬೇಕು ಎಂದು ಡಾ. ಜಯಬಸವಾನಂದ ಸ್ವಾಮೀಜಿ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿ.ಆರ್.ಐ. ಅಧ್ಯಕ್ಷ ಹಾಗೂ ಪ್ಯಾರಿಷ್ ಧರ್ಮಗುರು ರೆ.ಡಾ.ಡೊಮಿನಿಕ್ ವಾಸ್ ಮಾತನಾಡಿ ತತ್ವಜ್ಞಾನಿ ಗ್ಯಾಬ್ರಿಯೆಲ್ ಮಾರ್ಸೆಲ್‌ರ ವಾದವನ್ನು ಅನ್ವಯಿಸಿ ಹೇಳುವುದಾದರೆ ಪ್ರಸಕ್ತ ಸಮಾಜ ಕೆಟ್ಟುನಿಂತ ಗಡಿಯಾರದಂತೆ ಇದೆ. ಗಡಿಯಾರ ಹೊರಗೆ ನೋಡಲು ಚಂದ ಕಂಡರೂ ಕೆಲಸ ಮಾತ್ರ ಶೂನ್ಯ. ಸಾವಿರಾರು ಕಿಲೊಮೀಟರ್ ದೂರವನ್ನು ಕ್ಷಿಪ್ರಗತಿಯಲ್ಲಿ ತಲುಪಬಲ್ಲ ಜಗತ್ತಿನ ಮೂಲೆ ಮೂಲೆಯಲ್ಲಿ ನಡೆಯುತ್ತಿರುವುದನ್ನು ಸನಿಹದಲ್ಲೇ ನೋಡಬಲ್ಲ ಈ ಕಾಲದಲ್ಲಿ ಹೊಂದಾಣಿಕೆಯ ಬದುಕು ಸಾಧ್ಯವಿಲ್ಲ ಎಂಬಂತೆ ವ್ಯವಸ್ಥೆ ಕೆಟ್ಟು ಹೋಗಿದೆ ಎಂದರು.


ಶಾಂತಿ ಮತ್ತು ಪ್ರೀತಿಯನ್ನು ಹಂಚುವ ಕ್ರಿಸ್ಮಸ್ ಸಂದರ್ಭ ವಿಶ್ವದ 700ಕ್ಕೂ ಹೆಚ್ಚು ಕಡೆಗಳಲ್ಲಿ ಕ್ರೈಸ್ತರ ಮೇಲೆ ದಾಳಿಗಳಾಗಿವೆ. ಸಾಂತಾಕ್ಲಾಸ್ ವೇಷಧಾರಿ ಮತ್ತು ಕ್ಯಾರಲ್ಸ್ ಹಾಡುವ ಮಕ್ಕಳನ್ನೂ ಕೂಡ ದಾಳಿಕೋರರು ಬಿಡಲಿಲ್ಲ. ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆಯಾಗುತ್ತಿದೆ. ನೀಜೀರಿಯಾದಲ್ಲಿ ಮುಸ್ಲಿಂ ಮತ್ತು ಕ್ರೈಸ್ತರು ಹೊಡೆದಾಡುತ್ತಿದ್ದಾರೆ. ಉಕ್ರೇನ್ ಮೇಲೆ ಯುದ್ಧ ಸಾರಲಾಯಿತು. ಇದೆಲ್ಲಾ ಮನುಷ್ಯತ್ವಕ್ಕೆ ಅಪಾಯ ತಂದೊಡ್ಡಿವೆ ಎಂದು ರೆ.ಡಾ.ಡೊಮಿನಿಕ್ ವಾಸ್ ಹೇಳಿದರು.


ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಜನಸಾಮಾನ್ಯರು ಧಾರ್ಮಿಕ ಚೌಕಟ್ಟಿನೊಳಗೆ ಒಳ್ಳೆಯ ಕೆಲಸ ಮಾಡಿದರೂ ಅದನ್ನು ಸಂಶಯದಿಂದ ನೋಡಲಾಗುತ್ತದೆ. ಸಮಾನತೆ, ಸಾರ್ವಭೌಮತ್ವ, ಜಾತ್ಯತೀತ ತತ್ವ ದೂರವಾಗುತ್ತಿದೆ. ಇನ್ನೊಂದು ಧರ್ಮವನ್ನು ದ್ವೇಷಿಸುವವ ಪರಿಪಾಠ ಹೆಚ್ಚುತ್ತಿದೆ. ಇದರಿಂದ ಸಮಾಜಕ್ಕೆ ಹಾನಿಯಾಗಲಿದೆ. ನಮಗಿಂದು ಜಾಗತಿಕ ಶಾಂತಿಯ ಅಗತ್ಯವಿದೆ. ಅದಕ್ಕಾಗಿ ಸರ್ವಧರ್ಮ ಸಮನ್ವಯಿಗಳಾಗ ಬೇಕು. ದೇವರು, ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವವರನ್ನು ದೂರವಿಡಬೇಕು. ಧಾರ್ಮಿಕ ಚೌಕಟ್ಟಿನೊಳಗೆ ಬದುಕುವ ಕಲೆ ಕರಗತಮಾಡಿಕೊಳ್ಳಬೇಕು ಎಂದರು.

ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮಾತನಾಡಿ ಪ್ರವಾದಿ ಮುಹಮ್ಮದ್ ಪೈಗಂಬರ್ ಮುಸ್ಲಿಮರ ಪ್ರವಾದಿ ಮಾತ್ರವಲ್ಲ. ಅವರು ಮನುಕುಲದ ಪ್ರವಾದಿಯಾಗಿದ್ದಾರೆ. ಆದರೆ ಪ್ರವಾದಿ, ಇಸ್ಲಾಂ, ಶರೀಅತ್ ಏನು ಎಂಬುದರ ಬಗ್ಗೆ ಜಾತ್ಯತೀತರು ಅಂದು ಹೇಳಿಕೊಳ್ಳುವವರಿಗೆ ಇನ್ನೂ ತಿಳಿದಿಲ್ಲ. ಹಾಗಾಗಿ ಯುನಿವೆಫ್ ಕಳೆದ 20 ವರ್ಷದಿಂದ ಇಸ್ಲಾಮಿನ ಬಗ್ಗೆ ವಾಸ್ತವ ಸಂಗತಿಯನ್ನು ತಿಳಿಸಿ ಕೊಡುವ ಪ್ರಯತ್ನ ಮಾಡುತ್ತಿದೆ ಎಂದರು.

ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜೆಪ್ಪು ಸದ್ಭಾವನಾ ವೇದಿಕೆಯ ಅಧ್ಯಕ್ಷ ಹಾಗೂ ಯೋಗ ಗುರು ದಿವಾನ್ ಕೇಶವ ಭಟ್, ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಇನಾಸ್ ರಾಡ್ರಿಗಸ್, ರಾಜ್ಯಸಭಾ ಮಾಜಿ ಸದಸ್ಯ ಬಿ.ಇಬ್ರಾಹೀಂ, ಅಭಿಯಾನದ ಸಹ ಸಂಚಾಲಕರಾದ ಸೈಫುದ್ದೀನ್, ಮುಹಮ್ಮದ್ ಆಸಿಫ್ ಕುದ್ರೋಳಿ ಉಪಸ್ಥಿತರಿದ್ದರು.

ಅಭಿಯಾನದ ಸಂಚಾಲಕ ಯು.ಕೆ. ಖಾಲಿದ್ ಸ್ವಾಗತಿಸಿದರು. ಜುನೈದ್ ಕಿರಾಅತ್ ಪಠಿಸಿದರು. ಅಭಿಯಾನದ ಸಹ ಸಂಚಾಲಕ ಉಬೈದುಲ್ಲಾ ಬಂಟ್ವಾಳ ವಂದಿಸಿದರು. ಹುದೈಫ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು.








 


 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News