ಲೀಲಾವತಿ ಬೈಪಡಿತ್ತಾಯ ಯಕ್ಷಗಾನದಲ್ಲಿ ಹೊಸಬೆಳಕು ಮೂಡಿಸಿದ ಮೇರು ವ್ಯಕ್ತಿತ್ವ: ಡಾ.ಪ್ರಭಾಕರ ಜೋಶಿ
ದಿ.ಲೀಲಾವತಿ ಬೈಪಡಿತ್ತಾಯ ಸಂಸ್ಮರಣೆ
ಮಂಗಳೂರು: ಲೀಲಾವತಿ ಬೈಪಡಿತ್ತಾಯ ಯಕ್ಷಗಾನದಲ್ಲಿ ಹೊಸಬೆಳಕು ಮೂಡಿಸಿದ ಮೇರು ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ಯಕ್ಷಗಾನ ವಿದ್ವಾಂಸ ಡಾ.ಪ್ರಭಾಕರ ಜೋಶಿ ತಿಳಿಸಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಶ್ರೀಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ , ಬಾಳ ಕಾಟಿಪಳ್ಳ ಇವರ ಸಹಯೋಗದೊಂದಿಗೆ ತುಳು ಭವನದಲ್ಲಿ ರವಿವಾರ ಹಮ್ಮಿಕೊಂಡ ಮಹಿಳಾ ಭಾಗವತೆ ದಿ.ಲೀಲಾವತಿ ಬೈಪಡಿತ್ತಾಯ ಸಂಸ್ಮರಣಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಮಧೂರು ಯಕ್ಷಗಾನ ಪರಿಸರದಲ್ಲಿ ಬೆಳೆದ ಲೀಲಾವತಿ ಬೈಪಡಿತ್ತಾಯರು ಹಲವು ಸವಾಲುಗಳ ಮಧ್ಯೆ ಪೂರ್ಣಾವಧಿಯಾಗಿ ವೃತ್ತಿಪರ ಯಕ್ಷಗಾನ ಮೇಳದಲ್ಲಿ ಪ್ರಥಮವಾಗಿ ತೊಡಗಿಸಿಕೊಂಡ ಮಹಿಳಾ ಭಾಗವತರಾಗಿದ್ದಾರೆ.
ಲೀಲಾವತಿ ಬೈಪಡಿತ್ತಾಯರ ಮೊದಲು ಯಕ್ಷಗಾನ ರಂಗಕ್ಕೆ ಮಹಿಳೆಯರ ಪ್ರವೇಶವಾಗಿದೆ ಆದರೆ ಲೀಲಾವತಿ ಬೈಪಾಡಿತ್ತಾಯ ಅವರು ಯಕ್ಷಗಾನ ರಂಗದಲ್ಲಿ ಅಚ್ಚಳಿಯದ ನೆನಪು ಉಳಿಯುವಂತೆ ಮಾಡಿದ ಸಾಧನೆ ಮಾಡಿದ್ದಾರೆ. ಅವರು ಸೇರಿದಂತೆ ಯಕ್ಷಗಾನ ಕಲಾವಿದರ ಮಾಹಿತಿಯನ್ನು ದಾಖಲೀಕರಿಸುವ ಕೆಲಸ ತುಳು ಆಕಾಡೆಮಿಗಳಿಂದ ಆಗಬೇಕಾಗಿದೆ ಎಂದು ಪ್ರಭಾಕರ ಜೋಷಿ ತಿಳಿಸಿದ್ದಾರೆ. ಕಲಾವಿದನಾದ ಮಣಿನಾಲ್ಕೂರು ಮಾತನಾಡುತ್ತಾ, ಲೀಲಾವತಿ ಬೈಪಡಿತ್ತಾಯರು ಸಾಕಷ್ಟು ಕಲಾವಿದರ ಬೆಳವಣಿಗೆಗೆ ಕಾರಣರಾಗಿದ್ದಾರೆ.
ಲೀಲಾವತಿ ಅವರು ವ್ಯವಸಾಯಿ ಪೂರ್ಣಾ ಕಲಾವಿದೆಯಾಗಿ 25 ವರ್ಷ ತಿರುಗಾಟ ನಡೆಸಿರುವುದು ಅಸಾಧಾರಣ ದಾಖಲೆ.ಅವರು ವೃತ್ತಿಪರ ಮಹಿಳಾ ಭಾಗವತರಾಗಿ ಮೇಳದ ತಿರುಗಾಟ ನಡೆಸಿದಾಗ ಅವರ ಬಗ್ಗೆ ಸಹಾನುಭೂತಿ, ನಿರೀಕ್ಷೆ ಇತ್ತು. ಯಕ್ಷಗಾನ ಭಾಗವತರಾಗಿ ಯಾವುದೇ ಕಪ್ಪುಚುಕ್ಕೆ ಇಲ್ಲದ ವ್ಯಕ್ತಿತ್ವ ಅವರದ್ದು ಎಂದು ಡಾ.ಎಂ. ಪ್ರಭಾಕರ ಜೋಶಿ ಬಣ್ಣಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಲೀಲಾವತಿ ಬೈಪಡಿತ್ತಾ ಯ ಅವರ ಪತಿ ಹರಿ ನಾರಾಯಣ ಬೈಪಡಿತ್ತಾಯ, ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಎಸ್ ಸುರೇಂದ್ರರಾವ್, ಮಾಜಿ ಮೇಯರ್, ಶಶಿಧರ ಹೆಗ್ಡೆ,ಕಲಾವಿದ ನಾದ ಮಣಿನಾಲ್ಕೂರು, ಅವಿನಾಶ್ ಬೈಪಡಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.
ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.