ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ| ರನ್‌ವೇ ವಿಸ್ತರಣೆಗೆ 32.97 ಎಕರೆ ಹೆಚ್ಚುವರಿ ಭೂಮಿ ಪ್ರಸ್ತಾವನೆಗೆ ಎಎಐ ಅಸ್ತು
ಮಂಗಳೂರು: ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ 32.97 ಎಕರೆ ಹೆಚ್ಚುವರಿ ಭೂಮಿಯ ಅವಶ್ಯಕತೆಯಿದ್ದು, ಈ ಬಗ್ಗೆ ಸಲ್ಲಿಸಲಾದ ಪ್ರಸ್ತಾವನೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ಅನುಮೋದನೆ ನೀಡಿದೆ.
ರಾಜ್ಯ ಸರಕಾರವು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಭೂಮಿ ನೀಡುವವವರಿಗೆ ಗರಿಷ್ಠ ಪರಿಹಾರ ನೀಡಬೇಕೆಂದು ರಾಜ್ಯ ಸರಕಾರ ನಿಲುವಿಗೆ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ಒಪ್ಪಿಕೊಂಡಿದೆ ಎಂದು ತಿಳಿದು ಬಂದಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ(ಎಎಐ) ಕಾರ್ಯನಿರ್ವಾಹಕ ನಿರ್ದೇಶಕ (ಜೆವಿಸಿ -ಪಿಪಿಪಿ -2) ಅನಾಮಿ ಪಾಂಡೆ ಅವರು ರಾಜ್ಯ ಸರಕಾರದ ಮೂಲಸೌಕರ್ಯ ಅಭಿವೃದ್ಧಿ, ಬಂದರು, ಒಳನಾಡು ಜಲ ಸಾರಿಗೆ ಇಲಾಖೆಯ ಕಾರ್ಯದರ್ಶಿಗೆ 2025, ಸೆ.9ರಂದು ಬರೆದಿರುವ ಪತ್ರದಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ.
ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗಾಗಿ 32.97 ಎಕರೆ ಜಮೀನನ್ನು ರಾಜ್ಯ ಸರಕಾರದ ಮೂಲಕ ಸ್ವಾಧೀನಪಡಿಸಿಕೊಳ್ಳಲು ಜಮೀನಿನ ಮೌಲ್ಯ ಅಗತ್ಯದ ಎಲ್ಲ ವೆಚ್ಚಗಳನ್ನು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(ಎಂಜಿಐಎಎಲ್) ಸಂಸ್ಥೆಯು ಭರಿಸಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
*ನಿಲುವಿನಿಂದ ಹಿಂದೆ ಸರಿಯದ ರಾಜ್ಯ ಸರಕಾರ: ಹಿಂದೆ ಕೇಂದ್ರ ಸರಕಾರ ಭೂಮಿ ಉಚಿತವಾಗಿ ನೀಡಬೇಕೆಂದು ಒತ್ತಾಯಿಸಿತ್ತು. ಆದರೆ ಭೂಮಿ ಬಿಟ್ಟುಕೊಡಲು ಸ್ಥಳೀಯ ಭೂಮಾಲೀಕರಿಗೆ ಪರಿಹಾರ ನೀಡಬೇಕೆಂಬ ರಾಜ್ಯ ಸರಕಾರವು ಕೇಂದ್ರಕ್ಕೆ ತಿಳಿಸಿತ್ತು. ರಾಜ್ಯ ಸರಕಾರ ತನ್ನ ನಿಲುವಿನಿಂದ ಹಿಂದೆ ಸರಿಯದೆ ಭೂಮಿ ಕಳೆದು ಕೊಳ್ಳುವವರಿಗೆ ಪರಿಹಾರ ಒದಗಿಸಿಕೊಡುವ ಪ್ರಯತ್ನದಲ್ಲಿಯಶಸ್ವಿಯಾಗಿದೆ. ಜನಪರ ಕಾಳಜಿಯ ಹೊಂದಿರುವ ಕಾಂಗ್ರೆಸ್ ನೇತೃತ್ವದ ಸರಕಾರ ಎಂದಿಗೂ ಜನತೆಯ ಪರವಾಗಿದೆ ಎನ್ನುವುದಕ್ಕೆ ಇದು ಒಂದು ನಿದರ್ಶನವಾಗಿದೆ ಎಂದು ಕಾಂಗ್ರೆಸ್ ಧುರೀಣರಾದ ಪದ್ಮರಾಜ ಆರ್ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.