×
Ad

ಮಂಗಳೂರು | ನ.16ರಂದು ನಂದಿನಿಯ 2 ಹೊಸ ಉತ್ಪನ್ನ ಬಿಡುಗಡೆ

Update: 2025-11-14 18:09 IST

ಮಂಗಳೂರು, ನ.14: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ತಯಾರಿಸಲ್ಪಟ್ಟ ನಂದಿನಿ ಸೀಡ್ಸ್ ಡಿಲೈಟ್ ಮತ್ತು ಗುವಾ ಚಿಲ್ಲಿ ಲಸ್ಸಿ ಉತ್ಪನ್ನಗಳು ನ. 16ರಂದು ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದೆ.

ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜರಗಲಿರುವ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಆಚರಣೆ ಸಂದರ್ಭ ಈ ಉತ್ಪನ್ನಗಳನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದಾಗಿ ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಕೊಡವೂರು ತಿಳಿಸಿದ್ದಾರೆ.

ಕುಲಶೇಖರದ ನಂದಿನಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ನಂದಿನಿ ಹೊಸ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಹಾಲು ಒಕ್ಕೂಟವು ನ.17ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲಾ ನಂದಿನಿ ಪಾರ್ಲರ್, ಪ್ರಾಂಚೈಸಿ ಮತ್ತು ಡೀಲರ್ ಕೇಂದ್ರಗಳಲ್ಲಿ ಮೊದಲು ಬಂದ ಗ್ರಾಹಕರಿಗೆ ದಾಸ್ತಾನು ಮುಗಿಯುವವರೆಗೆ ಉಚಿತವಾಗಿ ನಂದಿನಿ ಸೀಡ್ಸ್ ಡಿಲೈಟ್ ಮತ್ತು ಗುವಾ ಚಿಲ್ಲಿ ಲಸ್ಸಿ ನೀಡಲಾಗುತ್ತದೆ. ಅವಿಭಜಿತ ಜಿಲ್ಲೆಯ ನಂದಿನಿ ಗ್ರಾಹಕರು ನೂತನ ಉತ್ಪನ್ನಗಳನ್ನು ಖರೀದಿಸಿ ಹಾಲು ಉತ್ಪಾಕರನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಪೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿದರು.

ಒಕ್ಕೂಟದಿಂದ ಆರೋಗ್ಯದಾಯಕವಾಗಿರುವ ನಂದಿನಿ ಸೀಡ್ಸ್ ಡಿಲೈಟ್ ಉತ್ಪನ್ನವನ್ನು ಅತ್ಯುತ್ತಮ ಗುಣಮಟ್ಟದ ಕಲ್ಲಂಗಡಿ ಬೀಜ, ಸಿಹಿ ಕುಂಬಳಕಾಯಿ ಬೀಜ, ಅಗಸೆ ಬೀಜ, ಬಾದಾಮಿ, ಸಕ್ಕರೆ, ನಂದಿನಿ ಹಾಲು, ನಂದಿನಿ ತುಪ್ಪ, ನಂದಿನಿ ಕೋವಾ ಬಳಸಿ ಆಧುನಿಕ ತಾಂತ್ರಿಕತೆಯಿಂದ ತಯಾರಿಸಲಾಗಿದೆ. ಇವುಗಳಲ್ಲಿ ಪ್ರೊಟೀನ್, ಫೈಬರ್, ವಿಟಮಿನ್ಸ್, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬುಗಳು ಸಮೃದ್ಧವಾಗಿದೆ ಎಂದು ಅವರು ಹೇಳಿದರು.

ನಂದಿನಿ ಗುವಾ ಚಿಲ್ಲಿ ಲಸ್ಸಿ ಉತ್ಪನ್ನವನ್ನು ಪೇರಳೆ ಹಣ್ಣಿನ ತಿರುಳು, ಉಪ್ಪು, ಸಕ್ಕರೆ, ಮೆಣಸಿನ ಹುಡಿ, ನಿಂಬೆ ಹಣ್ಣಿನ ರಸ ಮತ್ತು ನಂದಿನಿ ಮೊಸರನ್ನು ಬಳಸಿ ಆಧುನಿಕ ತಾಂತ್ರಿಕತೆಯಿಂದ ತಯಾರಿಸಲಾಗಿದೆ. ಇದರಲ್ಲಿ ಕ್ಯಾಲ್ಸಿಯಮ್, ವಿಟಮಿನ್ ಸಿ, ಪೊಟ್ಯಾಶಿಯಮ್ ಮುಂತಾದ ಪೋಷಕಾಂಶಗಳಿವೆ ಎಂದು ಅವರು ಹೇಳಿದರು.

ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಲಿನ ದರ ಕನಿಷ್ಠ ಎರಡು ರೂಪಾಯಿಯಾದರೂ ಏರಿಸುವಂತೆ ಮನವಿ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹಾಲಿನ ಉತ್ಪಾದನೆ ಹೆಚ್ಚಿದ್ದು, ಸುಮಾರು 1 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.

ಗೋಷ್ಟಿಯಲ್ಲಿ ನಿರ್ದೇಶಕರಾದ ಚಂದ್ರಶೇಖರ್ ಮಾಡ್ನೂರು, ಮಮತಾ ಶೆಟ್ಟಿ, ಸುಧಾಕರ ಶೆಟ್ಟಿ ಕಾರ್ಕಳ, ದೇವಿಪ್ರಸಾದ್ ಶೆಟ್ಟಿ, ನಂದರಾಮ್ ರೈ, ಆಡಳಿತ ನಿರ್ದೇಶಕ ವಿವೇಕ್, ಡೈರಿ ವ್ಯವಸ್ಥಾಪಕ ಗುರುಪ್ರಸಾದ್, ರವಿರಾಜ್ ಉಡುಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News