×
Ad

ಮಂಗಳೂರು: ಮನಪಾ ಟೈಗರ್ ಕಾರ್ಯಾಚರಣೆ ವಿರುದ್ಧ ಬೀದಿಗಿಳಿದ ಬೀದಿಬದಿ ವ್ಯಾಪಾರಿಗಳು

Update: 2024-08-07 12:53 IST

ಮಂಗಳೂರು, ಆ. 7: ನಗರದ ಪ್ರಮುಖ ಸ್ಥಳಗಳಲ್ಲಿ ಬೀದಿಬದಿ ವ್ಯಾಪಾರ ನಡೆಸುವವರ ಮೇಲೆ ಮಂಗಳೂರು ಮಹಾನಗರ ಪಾಲಿಕೆ ನಡೆಸುತ್ತಿರುವ ಟೈಗರ್ ಕಾರ್ಯಾಚರಣೆ ವಿರೋಧಿಸಿ ಬುಧವಾರ ಬೀದಿಬದಿ ವ್ಯಾಪಾರಿಗಳ ಬೀದಿಗಿಳಿದು ಹೋರಾಟ ನಡೆಸಿದರು.

ನಗರದ ಪಿವಿಎಸ್ ನ ಬಿಜೆಪಿ ಕಚೇರಿಯಿಂದ ನಗರದ ಮನಪಾ ಕಚೇರಿವರಗೆ ಬೃಹತ್ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬೀದಿಬದಿ ವ್ಯಾಪಾರಿಗಳಿಗೆ ನಗರದ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರು ಮೆರವಣಿಗೆ ಹಾಗೂ ಪ್ರತಿಭಟನೆಗೆ ಸಾಥ್ ನೀಡಿದರು.

ಮನಪಾ ಕಚೇರಿ ಎದುರು ನೂರಾರು ಸಂಖ್ಯೆಯಲ್ಲಿ ಪೋಲಿಸರು ಉಪಸ್ಥಿತರಿದ್ದು, ಬ್ಯಾರಿಕೇಡ್ ಗಳನ್ನು ಅಳವಡಿಸಿ ಪ್ರತಿಭಟನಾಕಾರರ ಪಾಲಿಕೆಗೆ ಮುತ್ತಿಗೆ ಯತ್ನವನ್ನು ತಡೆದರು.

 

ಪಾಲಿಕೆ ಕಚೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಬೀದಿಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಪಟ್ಟಣ ವ್ಯಾಪಾರ ಸಮಿತಿ ಸಭೆ ಮಾಡದೆ ಟೈಗರ್ ಕಾರ್ಯಾಚರಣೆ ಮಾಡುವುದು ಕಾನೂನುಬಾಹಿರ. ಕಾರ್ಯಾಚರಣೆ ವೇಳೆ ಅಧಿಕಾರಿಗಳು ಬಡ ವ್ಯಾಪಾರಿಗಳ ಜೊತೆ ಅನಾಗರಿಕವಾಗಿ, ಅಮಾನುಷವಾಗಿ ವರ್ತಿಸಿದ್ದಾರೆ ಎಂದು ದೂರಿದರು.

 

ಮೇಯರ್ ಸುಧೀರ್ ಶೆಟ್ಟಿ ಕೂಡ ಒಬ್ಬ ಬೀದಿಬದಿ ವ್ಯಾಪಾರಿ ಮಗ ಎಂಬುದು ನೆನಪಿರಲಿ. ಇದೀಗ ನೀವು ಮೇಯರ್ ಆಗಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿರುವುದು ಅಮಾನವೀಯ ಎಂದು ಹೇಳಿದರು.

ಮೇಯರ್ ಹೇಳಿರುವಂತೆ ಒಬ್ಬರಿಗೆ ಇನ್ನೂರು ತಳ್ಳುಗಾಡಿಗಳಿವೆ ಎಂಬುದನ್ನು ಸಾಬೀತುಪಡಿಸಿ, ನಾವು ಹೋರಾಟ ಕೈ ಬಿಡುತ್ತೇವೆ ಎಂದು ಸವಾಲು ಹಾಕಿದ ಇಮ್ತಿಯಾಝ್, 10 ಕಡೆ ವ್ಯಾಪಾರ ವಲಯ ಸ್ಥಾಪಿಸಲು ಪ್ರಸ್ತಾವ ಸಲ್ಲಿಸಿದ್ದು ಬೀದಿಬದಿ ಸಂಘಟನೆ. ನಿಮ್ಮ ಪ್ರಯತ್ನ ಅಲ್ಲ ಎಂದು ಹೇಳಿದರು.

 

ನಗರದಲ್ಲಿ 8,500 ಮಂದಿಗೆ ಸ್ವನಿಧಿ ಸಾಲ ಕೊಡಲಾಗಿದೆ. ಆದರೆ 667 ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ಸಾಧ್ಯ ಆಗಿಲ್ಲ. ನೀವು ಹಾಕಿರುವ ಷರತ್ತು ಬೀದಿಬದಿ ವ್ಯಾಪಾರಿಗಳ ಕಾನೂನಿನಲ್ಲಿ ಇಲ್ಲ. ಬಿಜೆಪಿ ಅಂದರೆ ಬುಲ್ಡೋಝರ್ ಅನ್ನೋದನ್ನು ಮಂಗಳೂರಿನಲ್ಲಿ ಟೈಗರ್ ಕಾರ್ಯಾಚರಣೆ ಮೂಲಕ ಸಾಬೀತುಪಡಿಸಿದ್ದಾರೆಎಂದು ಅವರು ಆರೋಪಿಸಿದರು.

ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದ ರೈತ ಮುಖಂಡ ಯಾದವ ಶೆಟ್ಟಿ, ಮಂಗಳೂರು ಪಾಲಿಕೆ ವ್ಯಾಪ್ತಿಯು ಮನಪಾ ಮೇಯರ್ ಅಥವಾ ಸದಸ್ಯರ ಪಿತ್ರಾರ್ಜಿತ ಆಸ್ತಿ ಅಲ್ಲ. ಇದು ನಮ್ಮ ಭೂಮಿ. ಬೀದಿಬದಿ ವ್ಯಾಪಾರ ನಮ್ಮ ಹಕ್ಕು ಎಂದು ಹೇಳಿದರು.

ಸಮಾನ ಮನಸ್ಕ ಸಂಘಟನೆಯ ಪ್ರಮುಖರಾದ ಮಂಜುಳಾ ನಾಯಕ್ ಮಾತನಾಡಿ, ಶಾಸಕ ವೇದವ್ಯಾಸ ಕಾಮತ್ ವಿರುದ್ದ ಹರಿಹಾಯ್ದರು.

ಶಾಸಕರಿಗೆ ತಾಕತ್ತಿದ್ದರೆ ಎಲ್ಲರಿಗೆ ಕೆಲಸ ಕೊಡಿಸಲಿ. ಅವರು ಬೀದಿ ವ್ಯಾಪಾರ ನಿಲ್ಲಿಸುತ್ತಾರೆ. ಇದು ದಕ ಜಿಲ್ಲೆ. ಇಲ್ಲಿ ಬಿಜೆಪಿಯ ಉತ್ತರ ಪ್ರದೇಶ ಮಾದರಿ ನಡೆಯದು ಎಂದರು.\\

 

ಪ್ರಮುಖರಾದ ಎಂ.ದೇವದಾಸ್ , ಕರುಣಾಕರ್, ಪದ್ಮಾವತಿ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ವಿ. ಕುಕ್ಯಾನ್, ಸೀತಾರಾಂ ಬೇರಿಂಜ, ಮುಹಮ್ಮದ್ ಕುಂಜತ್ತಬೈಲ್, ಸಂತೋಷ್ ಕುಮಾರ್ ಬಜಾಲ್, ನವೀನ್ ಕೊಂಚಾಡಿ, ರಿಝ್ವಾನ್ ಹರೇಕಳ, ಮೀನಾ ಟೆಲ್ಲಿಸ್, ಮಂಜುಳಾ ನಾಯಕ್, ಜಯಂತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಸುರೇಶ್ ಕುಮಾರ್, ಶೇಖರ್, ದಯಾನಂದ್ ಶೆಟ್ಟಿ, ಕವಿತಾ ವಾಸು, ಜಯಂತಿ ಶೆಟ್ಟಿ, ಭಾರತಿ ಬೋಳಾರ್, ಮಂಜುಳಾ ನಾಯಕ್, ಬೀದಿಬದಿ ವ್ಯಾಪಾರಿಗಳ ಸಂಘಟನೆಯ ಅಧ್ಯಕ್ಷ ಮುಹಮ್ಮದ್ ಮುಸ್ತಫ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರ್ವಹಿಸಿದರು.

ಪ್ರತಿಭಟನೆಯಲ್ಲಿ ಎಸ್ ಡಿಟಿಯು ಭಾಗಿಯಾಗಿದ್ದಕ್ಕೆ ಆಕ್ಷೇಪ

ಪ್ರತಿಭಟನೆಯಲ್ಲಿ ಎಸ್ ಡಿಟಿಯು ಕಾರ್ಯಕರ್ತರು ತಮ್ಮ ಸಂಘಟನೆಯ ಬಾವುಟದೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದನ್ನು ಪ್ರತಿಭಟನಾಕಾರರು ಆಕ್ಷೇಪಿಸಿದ ಘಟನೆ ನಡೆಯಿತು.

ಸಮಾನಮನಸ್ಕ ಸಂಘಟನೆ, ಸಮಸ್ತ ಧರ್ಮಗಳ ಪರವಾದ ಬಾವುಟ ಇದೆ. ಯಾವುದೇ ಧರ್ಮದ ಬಾವುಟ ಪ್ರತಿಭಟನೆಯಲ್ಲಿ ಬೇಡ ಎಂದು ಪ್ರತಿಭಟನಾ ಸಂಘಟಕರು ವಿರೋಧಿಸಿದರು.

ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ಅಲ್ಲಿ ಸೇರಿದ್ದ ಎಸ್ ಡಿ ಟಿಯು ಕಾರ್ಯಕರ್ತರನ್ನು ಹೊರ ಕಳುಹಿಸಲಾಯಿತು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News