ಮಂಗಳೂರು | ಗ್ರೀನ್ ವೀವ್ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ
ಮಂಗಳೂರು : ಜಮೀಯ್ಯತುಲ್ ಫಲಾಹ್ ಗ್ರೀನ್ ವೀವ್ ವಿದ್ಯಾಸಂಸ್ಥೆ ಅಡ್ಕರೆಪಡ್ಪುವಿನಲ್ಲಿ ವಾರ್ಷಿಕ ಕ್ರೀಡಾಕೂಟ 2025 ಕಾರ್ಯಕ್ರಮವನ್ನು ಮಂಗಳೂರು ನಗರ ಪೊಲೀಸ್ ಸಹಾಯಕ ಆಯುಕ್ತರಾದ ನಜ್ಮಾ ಫಾರೂಕಿ ಅವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪಾಲನೆ ಹಾಗೂ ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವ ಬೆಳೆಸಿದಲ್ಲಿ ನಮ್ಮ ಗುರಿಯನ್ನು ತಲುಪಲು ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾನೂನನ್ನು ಅರಿತುಕೊಳ್ಳುವುದರ ಜೊತೆಗೆ ತಂದೆ, ತಾಯಿ ಮತ್ತು ಶಿಕ್ಷಕರೊಂದಿಗೆ ಗೌರವದಿಂದ ನಡೆದುಕೊಂಡಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಧ್ವಜಾರೋಹಣವನ್ನು ಕೊಣಾಜೆ ಪಂಚಾಯತ್ ಅಧ್ಯಕ್ಷೆಯಾದ ಗೀತಾ ಕುಂದರ್ ರವರು ನಿರ್ವಹಿಸಿದರು. ವಿದ್ಯಾರ್ಥಿಗಳ ಪಥಸಂಚಲನ ಗೌರವ ವಂದನೆಯನ್ನು ಜಮೀಯ್ಯತುಲ್ ಫಲಾಹ್ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಕೋಡಿಜಾಲ್ ಸ್ವೀಕರಿಸಿದರು. ಕೋಶಾಧಿಕಾರಿ ವಿ.ಇಬ್ರಾಹೀಂ ನಡುಪದವು ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು.
ವೇದಿಕೆಯಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂಚಲಾಕ್ಷಿ, ಸದಸ್ಯರಾದ ಹೈದರ್, ಝೊಹರಾ, ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾದ ಜಾಫರ್, ಎಸ್.ಬಿ.ಸಿ ಅಧ್ಯಕ್ಷರಾದ ಅಸೈನಾರ್ ಎ.ಬಿ, ಉಪಾಧ್ಯಕ್ಷರಾದ ಮಾಲತಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾದ ನಮಿತಾ ಬಿ.ಎನ್, ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಸಿಂಧಿಯಾ ಲೂಸಿ ಮಸ್ಕರೇನಸ್ ಉಪಸ್ಥಿತರಿದ್ದರು.
ಸಂಸ್ಥೆಯ ಸಂಚಾಲಕರಾದ ಪರ್ವೇಜ್ ಅಲಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಂಶುಪಾಲರಾದ ಅಬೂಬಕ್ಕರ್ ಕೆ. ವಂದಿಸಿದರು. ಗಣಿತ ಶಿಕ್ಷಕಿ ರಶ್ಮಿ ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು.