ಕೊಣಾಜೆ | ಕ್ರೀಡೆಯಲ್ಲಿ ಸಾಧನೆ ಮಾಡಲು ಕಠಿಣ ಪರಿಶ್ರಮ ಮುಖ್ಯ : ಅರುಣ್ ಕುಮಾರ್ ಗಟ್ಟಿ
ಕೊಣಾಜೆ: ಕ್ರೀಡೆಯಲ್ಲಿ ಸಾಧನೆ ಮಾಡಲು ಕಠಿಣ ಪರಿಶ್ರಮ, ಬದ್ಧತೆ, ಸಮಯ ಪ್ರಜ್ಞೆ,ತಾಳ್ಮೆ, ಆತ್ಮವಿಶ್ವಾಸ ಗುಣಗಳೇ ಮುಖ್ಯ. ಆದರೆ, ಬಡತನ ಎನ್ನುವುದು ಕ್ರೀಡಾ ಸಾಧನೆಗೆ ಅಡ್ಡಿ ಬರುವುದಿಲ್ಲ, ವಿಶ್ವ ಕಪ್ ಕಬಡ್ಡಿ ಪಂದ್ಯಾಟದಲ್ಲಿ ವಿಜೇತರಾಗಿರುವ ಧನಲಕ್ಷ್ಮೀ ಪೂಜಾರಿ ಅವರು ಕಡು ಬಡತನದಲ್ಲಿ ಹುಟ್ಟಿ ಇಂದು ವಿಶ್ವದಲ್ಲೇ ತನ್ನ ಹೆಸರನ್ನು ದಾಖಲಿಸಿಕೊಂಡದ್ದು ನಮಗೆಲ್ಲ ಉದಾಹರಣೆ. ಸೋಲು ಮತ್ತು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಅದನ್ನು ಸಮಾನವಾಗಿ ಸ್ವೀಕರಿಸಿದಾಗ ಕ್ರೀಡಾ ಜೀವನದಲ್ಲಿ ಅದ್ಭುತವಾದ ಯಶಸ್ಸುಗಳಿಸಲು ಸಾಧ್ಯ ಎಂದು ರಾಜ್ಯ ಮಟ್ಟದ ಮಾಜಿ ಕ್ರೀಡಾಪಟು ಆಗಿರುವ ಅರುಣ್ ಕುಮಾರ್ ಗಟ್ಟಿ ಅಗರಿಮಾರ್ ಅಭಿಪ್ರಾಯ ಪಟ್ಟರು.
ಅವರು ಹರೇಕಳ ಶ್ರೀ ರಾಮಕೃಷ್ಣಅನುದಾನಿತ ಪ್ರೌಢಶಾಲೆಯ ಶಾಲಾ ಅಂತರ್ಗತ ಪಂದ್ಯಾಟ - ಕ್ರೀಡಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ಮೋಹಿನಿ ಅವರು ವಹಿಸಿ ಮಕ್ಕಳು ಪ್ರತಿನಿತ್ಯ ಕ್ರೀಡೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ಉತ್ತಮ ಅರೋಗ್ಯ ಸಾಧ್ಯ , ಇಂದು ಮೊಬೈಲ್ ಗೆ ದಾಸರಾಗುವ ಮಕ್ಕಳು ಯಾವುದಾದರೂ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮಾನಸಿಕ, ಬೌದ್ಧಿಕ ಅರೋಗ್ಯ ವೃದ್ಧಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಸಾಧಕ ಅರುಣ್ ಕುಮಾರ್ ಗಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಲತಾ, ಶಾಲಾ ನಾಯಕಿ ಫಾತಿಮ ರಫೀದ, ಚೈತನ್ಯ ಕ್ರೀಡಾ ಸಂಘದ ನಾಯಕ ಅನ್ವಿತ್ ಮುಂತಾದವರು ಉಪಸ್ಥಿತರಿದ್ದರು.ಶಿಕ್ಷಕರಾದ ಕೃಷ್ಣ ಶಾಸ್ತ್ರೀ, ಸ್ಮಿತಾ ಸಹಕರಿಸಿದರು.
ಹಿರಿಯ ಶಿಕ್ಷಕರಾದ ರವಿಶಂಕರ್ ಸರ್ವರನ್ನು ಸ್ವಾಗತಿಸಿದರು, ಶಿಕ್ಷಕ ಶಿವಕುಮಾರ್ ಧನ್ಯವಾದವಿತ್ತರು. ಕಾರ್ಯಕ್ರಮ ಸಯ್ಯೋಜಕರು, ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ನಿರೂಪಿಸಿದರು.