×
Ad

ಮಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

Update: 2025-01-03 19:03 IST

ಮಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಾಡಿನ ಜನರಿಗಷ್ಟೆ ಅಲ್ಲ, ಗುತ್ತಿಗೆದಾರರಿಗೆ, ನಿಷ್ಟಾವಂತ ಸರಕಾರಿ ಅಧಿಕಾರಿಗಳಿಗೂ ನೆಮ್ಮದಿ ಇಲ್ಲ. ಆತ್ಮಹತ್ಯೆಯೇ ಅವರ ಪಾಲಿನ ಗ್ಯಾರಂಟಿಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮಿನಿ ವಿಧಾನ ಸೌಧದ ಬಳಿ ದ.ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಶುಕ್ರವಾರ ನಡೆದ ಪ್ರತಿಭಟನೆ ಹಾಗೂ ಪೋಸ್ಟರ್ ಅಭಿಯಾನದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಕಾಂಗ್ರೆಸ್ ಸರಕಾರದ ಸಚಿವರ, ಶಾಸಕರ, ಅವರ ಆಪ್ತ ಸಹಾಯಕರ ಒತ್ತಡ, ಬೆದರಿಕೆಗೆ ಸರಕಾರಿ ನೌಕರರು, ಗುತ್ತಿಗೆದಾರರು, ಸಾಲು ಸಾಲಾಗಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ಇದರಿಂದ ಪ್ರಾಣ ಕಳೆದುಕೊಂಡವರ ಕುಟುಂಬ ಬೀದಿಗೆ ಬರುತ್ತಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆಯ ಆಪ್ತರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಚಿನ್ ಪ್ರಕರಣವನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಕುರ್ಚಿ ಅಲುಗಾಡುವ ಭಯದಿಂದ ಸಿದ್ದರಾಮಯ್ಯ ಮತ್ತು ಭವಿಷ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕೈ ತಪ್ಪಬಹುದು ಎಂಬ ಭಯದಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಿಯಾಂಕ್ ಖರ್ಗೆ ವಿರುದ್ಧ ಮಾತನಾಡುತ್ತಿಲ್ಲ ಎಂದರು.

ಪ್ರತಿಭಟನೆಯಲ್ಲಿ ರಮೇಶ್ ಕಂಡೆಟ್ಟು, ಪ್ರೇಮಾನಂದ ಶೆಟ್ಟಿ, ವಿಕಾಸ್ ಪುತ್ತೂರು, ನಂದನ್ ಮಲ್ಯ, ಮೋನಪ್ಪ‌ ಭಂಡಾರಿ, ಪೂಜಾ ಪೈ, ಉಪ ಮೇಯರ್ ಭಾನುಮತಿ, ಸಂಜಯ್ ಪ್ರಭು ಮತ್ತಿತರರು ಪಾಲ್ಗೊಂಡಿದ್ದರು.

*ಪ್ರತಿಭಟನೆಯ ಬಳಿಕ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಶಾಸಕ ವೇದವ್ಯಾಸ ಕಾಮತ್ ಸಹಿತ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.













Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News