×
Ad

ಮಂಗಳೂರು| ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಕೆ ಆರೋಪ: ಪ್ರಕರಣ ದಾಖಲು

Update: 2025-12-31 20:24 IST

ಮಂಗಳೂರು: ಸೂಕ್ತ ದಾಖಲೆಗಳಿಲ್ಲದೆ ಗೋಮಾಂಸ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿ ನಾರ್ಲಪದವು ರಸ್ತೆಯಲ್ಲಿ ಕಳೆದ ಶನಿವಾರ ಮುಲ್ಲರಪಟ್ನದ ಅಬ್ದುಲ್ ಸತ್ತಾರ್ ಗೋಮಾಂಸ ಸಾಗಾಟ ಮಾಡುತ್ತಿದ್ದಾಗ ಇಬ್ಬರು ಯುವಕರು ತಡೆದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಸುಮಿತ್ ಭಂಡಾರಿ ಮತ್ತು ರಜತ್ ನಾಯ್ಕ್ ವಿರುದ್ಧ ಅನೈತಿಕ ಪೊಲೀಸ್‌ಗಿರಿ ಆರೋಪದಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಸೂಕ್ತ ದಾಖಲೆಗಳಿಲ್ಲದೆ ಮಾಂಸ ಸಾಗಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಬ್ದುಲ್ ಸತ್ತಾರ್‌ನನ್ನು ಕೂಡ ಪೊಲೀಸರು ಬಂಧಿಸಿದ್ದರು.

ಅಬ್ದುಲ್ ಸತ್ತಾರ್‌ನ ಜಾಮೀನು ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ಬಿಲ್‌ನ್ನು ಹಾಜರುಪಡಿಸಲಾಗಿತ್ತು. ಆ ಬಿಲ್‌ನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಪೊಲೀಸ್ ತನಿಖಾಧಿಕಾರಿ ಬಿಲ್ ಬುಕ್ ಜಪ್ತಿ ಮಾಡಿ ಪರಿಶೀಲನೆ ನಡೆಸಿದಾಗ ನ್ಯಾಯಾಲಯಕ್ಕೆ ನಕಲಿ ಬಿಲ್ ಸಲ್ಲಿಸಿರುವುದು ಗೊತ್ತಾಗಿದೆ. ಆ ಹಿನ್ನೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಕಲಿ ಬಿಲ್ ಸಲ್ಲಿಕೆಗೆ ಸಂಬಂಧಿಸಿದಂತೆ ಮಾಂಸ ಸಾಗಾಟ ಮಾಡುತ್ತಿದ್ದ ಅಬ್ದುಲ್ ಸತ್ತಾರ್, ನಕಲಿ ಬಿಲ್ ನೀಡಿದ್ದ ಅಂಗಡಿ ಮಾಲಕ ತೊಕ್ಕೊಟ್ಟು ಸಮೀಪದ ಚೊಂಬುಗುಡ್ಡೆ ನಿವಾಸಿ ಅಬ್ದುಲ್ ಸತ್ತಾರ್ ಮತ್ತು ಬಿಲ್ ಸಂಗ್ರಹಿಸಿದ ಮುಲ್ಲರ ಪಟ್ನ ನಿವಾಸಿ ಸಿಯಾಬುದ್ದೀನ್ ಯಾನೆ ಸಿಯಾಬ್ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಲ್ ಬುಕ್‌ನ್ನು ಅಂಗಡಿಯಿಂದ ಜಪ್ತಿ ಮಾಡಿ ಪರಿಶೀಲಿಸಿದಾಗ ನ್ಯಾಯಾಲಯಕ್ಕೆ ನಕಲಿ ಬಿಲ್ ಸಲ್ಲಿಸಿರುವುದು ಗೊತ್ತಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News