×
Ad

Mangaluru | ಸಿಸಿಬಿ ಪೊಲೀಸರ ಕಾರ್ಯಾಚರಣೆ: ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಆರೋಪದಲ್ಲಿ ನಾಲ್ವರ ಸೆರೆ

50 ಲಕ್ಷ ರೂ. ಮೌಲ್ಯದ ಎಂಡಿಎಂಎ ವಶ

Update: 2025-12-06 20:09 IST

ಮಂಗಳೂರು, ಡಿ.6: ನಗರದ ಸಿಸಿಬಿ ಪೊಲೀಸರು ಶನಿವಾರ ನಡೆಸಿದ ಕಾರ್ಯಾಚರಣೆಯಲ್ಲಿ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ, 50 ಲಕ್ಷ ರೂ. ಮೌಲ್ಯದ ಸುಮಾರು 517.76 ಗ್ರಾಂ ಎಂಡಿಎಂಎ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೈಂದೂರು ನಾವುಂದದ ಮುಹಮ್ಮದ್ ಶಿಯಾಬ್ ಯಾನೆ ಶಿಯಾಬ್, ಉಳ್ಳಾಲ ನರಿಂಗಾನದ ಮುಹಮ್ಮದ್ ನೌಷದ್ ಯಾನೆ ನೌಷದ್ , ಮಂಗಳೂರು ಕಸಬಾ ಬೆಂಗ್ರೆಯ ಇಮ್ರಾನ್ ಯಾನೆ ಇಂಬ, ಮತ್ತು ಬಂಟ್ವಾಳ ಬ್ರಹ್ಮರ ಕೊಟ್ಲುವಿನ ನಿಸಾರ್ ಅಹಮ್ಮದ್ ಯಾನೆ ನಿಸಾರ್ ಬಂಧಿತ ಆರೋಪಿಗಳು.

ಡಿ.6ರಂದು ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಂದರಾಮ್ ಶೆಟ್ಟಿ ಕನ್ವಿನ್ಷನ್ ಹಾಲ್ ಬಳಿ ಆರೋಪಿಗಳು ಒಂದು ಕಾರಿನಲ್ಲಿ ಮಾದಕ ವಸ್ತುವನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದ ಪೊಲೀಸರ ತಂಡವು ದಾಳಿ ನಡೆಸಿ ನಾಲ್ಕು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳ ಬಳಿ ಮಾದಕ ವಸ್ತುಗಳು ಪತ್ತೆಯಾಗಿದೆ. ಅವರ ಬಳಿ ಇದ್ದ ಸುಮಾರು 50 ಲಕ್ಷ ರೂ. ಮೌಲ್ಯದ ಸುಮಾರು 517.76 ಗ್ರಾಂ ಎಂ.ಡಿ.ಎಂ.ಎ. ಹಾಗೂ ಕೃತ್ಯಕ್ಕೆ ಬಳಸಿದ 10 ಲಕ್ಷ ಮೌಲ್ಯದ ಕಾರು, ಹಾಗೂ 5 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಮಾದಕ ವಸ್ತುವನ್ನು ಆರೋಪಿಗಳು ಬೆಂಗಳೂರಿನಲ್ಲಿ ಒಬ್ಬ ನೈಜೀರಿಯಾ ದೇಶದ ವ್ಯಕ್ತಿಯಿಂದ ಖರೀದಿಸಿ , ಮಂಗಳೂರು ನಗರದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪೂರೈಕೆ ಮಾಡಿ ಹಣ ಗಳಿಸುವ ಉದ್ದೇಶದಿಂದ ತಂದಿರುವುದಾಗಿ ತಿಳಿದು ಬಂದಿರುತ್ತದೆ.

ಆರೋಪಿಗಳ ವಿರುದ್ದ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ:124/2025 ಕಲಂ:22(ಸಿ) , 21(ಅ) ಎನ್‌ಡಿಪಿಎಸ್ ಕಾಯ್ದೆ ಜೊತೆಗೆ 3(5) ಬಿಎನ್‌ಎಸ್‌ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News