ಮಂಗಳೂರು | ವಿವಾಹ ನೋಂದಣಿಗೆ ವ್ಯವಸ್ಥೆ ಕಲ್ಪಿಸಲು ಮುಸ್ಲಿಂ ಸೆಂಟ್ರಲ್ ಕಮಿಟಿ ಮನವಿ
ಮಂಗಳೂರು, ಡಿ.10: ಮುಸ್ಲಿಂ ವಿವಾಹ ನೋಂದಣಿಗೆ ಪೂರಕವಾಗಿ ಸೂಕ್ತ ಕಾನೂನನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ನಿಯೋಗವು ಸ್ಪೀಕರ್ ಯು.ಟಿ. ಖಾದರ್ ಮತ್ತು ರಾಜ್ಯ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಅವರನ್ನು ಬುಧವಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು.
ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಅವರ ನಿರ್ದೇಶನದಂತೆ ಉಪಾಧ್ಯಕ್ಷ ಮಾಜಿ ಮೇಯರ್ ಕೆ.ಅಶ್ರಫ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದ ನಿಯೋಗವು ಈ ಹಿಂದೆ ರಾಜ್ಯದಲ್ಲಿ ವಕ್ಫ್ ಸಂಸ್ಥೆಗಳ ಮೂಲಕ ಮುಸಲ್ಮಾನರ ವಿವಾಹ ನೋಂದಣಿಗೆ ಅವಕಾಶವಿತ್ತು. ಬಳಿಕ ಅದನ್ನು ಹಿಂಪಡೆಯಲಾಗಿದೆ. ಇದರಿಂದ ಅಸಂಖ್ಯಾತ ಮುಸಲ್ಮಾನರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಇತರ ಸಮುದಾಯದ ವಿವಾಹ ನೋಂದಣಿ ಕಾರ್ಯವು ಅತ್ಯಲ್ಪಸಮಯದಲ್ಲಿ ನಡೆಯುತ್ತಿದ್ದು, ಮುಸಲ್ಮಾನರು ವಿಶೇಷ ವಿವಾಹ ಕಾನೂನುಗಳ ಮೂಲಕ ನೋಂದಣಿ ಮಾಡಬೇಕಾದ ಅನಿವಾರ್ಯತೆಯಿಂದ ವಿವಾಹ ನೋಂದಣಿಗೆ ಒಂದು ತಿಂಗಳು ಕಾಯುವಂತಾಗಿದೆ. ಇದರಿಂದ ವಿದೇಶದಲ್ಲಿ ಉದ್ಯೋಗದಲ್ಲಿರುವ ರಾಜ್ಯದ ಯುವ ಜನತೆ, ವಿವಾಹವಾದ ನಂತರ ಸಂಗಾತಿಯನ್ನು ಶೀಘ್ರದಲ್ಲೇ ಕರೆದುಕೊಂಡು ಹೋಗಲು ಅಥವಾ ಅವರಿಗೆ ಪೂರಕವಾದ ಉದ್ಯೋಗವನ್ನು ಕೊಡಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಮುಸಲ್ಮಾನರ ವಿವಾಹ ನೋಂದಣಿಗೆ ಅವಕಾಶ ಕಲ್ಪಿಸಲು ಪೂರಕವಾದ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದೆ.
ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸಮ್ಮುಖ ಮನವಿ ಸಲ್ಲಿಸಿದ ನಿಯೋಗದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಬಂದರ್, ಕಾರ್ಯದಶಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಸಿ.ಎಂ. ಹನೀಫ್, ಸಂಘಟನಾ ಕಾರ್ಯದರ್ಶಿ ಅಬ್ಬಾಸ್ ಉಚ್ಚಿಲ್ ಮತ್ತಿತರರು ಉಪಸ್ಥಿತರಿದ್ದರು.