ಮಂಗಳೂರಿನಲ್ಲಿ ಭಾರತದ ಅತಿದೊಡ್ಡ ಭೂಗತ ಎಲ್ಪಿಜಿ ಸಂಗ್ರಹಣಾಗಾರ ನಿರ್ಮಾಣ ಪೂರ್ಣ
ಮಂಗಳೂರಿನಲ್ಲಿ ಭಾರತದ ಅತಿದೊಡ್ಡ ಭೂಗತ ಎಲ್ಪಿಜಿ (ದ್ರವೀಕತ ಪೆಟ್ರೋಲಿಯಂ ಅನಿಲ) ಸಂಗ್ರಹಣಾಗಾರ ನಿರ್ಮಾಣ ಪೂರ್ಣಗೊಂಡಿದೆ.
ಜೂ.6ರಂದು ಎಲ್ಲಾ ಪರೀಕ್ಷಾ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಈ ಸಂಗ್ರಹಾಗಾರ, ಈಗ ಕಾರ್ಯಾಚರಣೆಗೆ ಸಂಪೂರ್ಣವಾಗಿ ಸಿದ್ಧವಾಗಿದೆ. ದೇಶದ ಇಂಧನ ಮೂಲ ಸೌಕರ್ಯ ವ್ಯವಸ್ಥೆಯಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಗಾಗಿ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL) ಈ ಸಂಗ್ರಹಾಗಾರ ನಿರ್ಮಿಸಿದೆ.
80,000 ಮೆಟ್ರಿಕ್ ಟನ್‌ಗಳ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಈ ಸಂಗ್ರಹಾಗಾರ Mangalore LPG Import Facility (MLIF)ಯ ಭಾಗವಾಗಿದೆ. ವಿಶಾಖಪಟ್ಟಣಂನಲ್ಲಿ ಕೂಡಾ ಇದೇ ರೀತಿಯ ಭೂಗತ ಸಂಗ್ರಹಣಾಗಾರವಿದೆ. ಆ ಸಂಗ್ರಹಾಗಾರ 60 ಸಾವಿರ ಟನ್‌ಗಳಾಗಿದ್ದು, ಮಂಗಳೂರಿನ ಸಂಗ್ರಹಾಗಾರ ಅದಕ್ಕಿಂತಲೂ ಹೆಚ್ಚಿನ ಸಾಮರ್ಥ್ಯದ ಎಲ್‌ಪಿಜಿ ಸಂಗ್ರಹಿಸುವ ಭೂಗತ ಸುರಂಗ ಯೋಜನೆಯಾಗಿದೆ.
ಈಗಾಗಲೇ ಮಂಗಳೂರಿನ ಪೆರ್ಮುದೆಯಲ್ಲಿ 1.5 ಲ.ಮೆಟ್ರಿಕ್ ಟನ್ ಹಾಗೂ ಪಾದೂರಿನಲ್ಲಿ 2.5 ಲ.ಮೆಟ್ರಿಕ್ ಟನ್ ಭೂಗತ ಕಚ್ಚಾ ತೈಲ ಸಂಗ್ರಹಣಾಗಾರಗಳಿವೆ. ಇದು ಎಲ್‌ಪಿಜಿ ಸಂಗ್ರಹದ ಭೂಗತ ಸುರಂಗ ಯೋಜನೆಯಾಗಿದೆ.
ಒಟ್ಟಾರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಮಹತ್ವದ ಹಾಗು ಅಷ್ಟೇ ಸೂಕ್ಷ್ಮ ಮೂರು ಭೂಗತ ಸಂಗ್ರಹಾಗಾರಗಳು ಸ್ಥಾಪನೆಯಾಗಿವೆ.
2018ರಲ್ಲಿ ಕೇಂದ್ರ ಸರಕಾರ ಈ ಯೋಜನೆ ರೂಪಿಸಿದ್ದು, 2019ರಿಂದ ಕಾಮಗಾರಿ ಆರಂಭಗೊಂಡಿತ್ತು. ಸಂಗ್ರಹಣಾಗಾರಕ್ಕೆ ಸಮುದ್ರದಲ್ಲಿರುವ ತೇಲುಜೆಟ್ಟಿ ಮೂಲಕ ಮುಂದಿನ ದಿನಗಳಲ್ಲಿ ಅನಿಲವನ್ನು ಪಂಪಿಂಗ್ ಮಾಡಲಾಗುತ್ತದೆ. ಅದಕ್ಕೆ ಬೇಕಾದ ಪೈಪ್‌ಲೈನ್ ನಿರ್ಮಾಣವೂ ಪೂರ್ಣಗೊಂಡಿರುತ್ತದೆ. ಇದಕ್ಕಾಗಿ 800 ಕೋ.ರೂ. ವೆಚ್ಚ ಮಾಡಲಾಗಿದೆ.
ದಕ್ಷಿಣ ಮತ್ತು ಮಧ್ಯ ಭಾರತದಾದ್ಯಂತ ನಿರಂತರ ಎಲ್ಪಿಜಿ ವಿತರಣೆಗೆ ಪೂರಕವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಯುದ್ಧದ ಸಮಯದಲ್ಲಿ, ಪೂರೈಕೆ ಅಡಚಣೆಗಳು ಅಥವಾ ನೈಸರ್ಗಿಕ ವಿಕೋಪಗಳಂತಹ ತುರ್ತು ಸಂದರ್ಭಗಳಲ್ಲಿ ಈ ಸಂಗ್ರಹಾಗಾರ ನಿರ್ಣಾಯಕ ಮೀಸಲು ಪ್ರದೇಶವಾಗಿ ಉಪಯೋಗವಾಗಲಿದೆ.
ಈ ಸಂಗ್ರಹಣಾಗಾರವನ್ನು ಸಮುದ್ರ ಮಟ್ಟಕ್ಕಿಂತ 141 ಮೀಟರ್ ಆಳದಲ್ಲಿ ವಿಶೇಷ ಗ್ರಾನೈಟಿಕ್ ಗ್ನಿಸ್ ಬಂಡೆಯೊಳಗೆ ಕೊರೆಯಲಾಗಿದೆ. ಹೈಡ್ರಾಲಿಕ್ ಕಂಟೈನ್‌ಮೆಂಟ್ ನಿರ್ಮಾಣ ಮಾದರಿಯನ್ನು ಈ ಯೋಜನೆಯಲ್ಲಿ ಅನುಸರಿಸಲಾಗಿದೆ. ಅಂದರೆ ಸುತ್ತಮುತ್ತಲಿನ ಅಂತರ್ಜಲ ಒತ್ತಡ ಎಲ್‌ಪಿಜಿಯನ್ನು ಬಂಡೆಯ ಚೇಂಬರ್‌ನೊಳಗೆ ಸುರಕ್ಷಿತವಾಗಿ ಇರಿಸಲು ಸಹಾಯ ಮಾಡುತ್ತದೆ. ಅನಿಲ ಸಂಗ್ರಹಣೆ ಮತ್ತು ಸಾಗಾಟ ಸುರಕ್ಷಿತವಾಗಿರುವಂತೆ ಇದರ ವಿನ್ಯಾಸವಿದೆ.
ಈ ಸಂಗ್ರಹಾಗಾರದಲ್ಲಿ 1.1 ಕಿಲೋಮೀಟರ್ ಉದ್ದದ ಪ್ರವೇಶ ಸುರಂಗವಿದೆ. 220 ಮೀಟರ್‌ಗಳ ಕ್ಯಾವರ್ನ್ S1 ಮತ್ತು 225 ಮೀಟರ್‌ಗಳ ಕ್ಯಾವರ್ನ್ S2 ಎಂಬ ಎರಡು ಸಂಗ್ರಹಣಾಗಾರಗಳಿವೆ. ನೀರಿನ ಒತ್ತಡ ನಿಭಾಯಿಸಲು ಮತ್ತು ಅನಿಲ ಸೋರಿಕೆ ತಡೆಯಲು ಒಟ್ಟು 13 ಕಿಮೀ ಗಳಿಗಿಂತ ಹೆಚ್ಚು ಲಂಬ ಮತ್ತು ಇಳಿಜಾರಾದ ಬೋರ್‌ಹೋಲ್‌ಗಳನ್ನು ಹೊಂದಿರುವ ವಾಟರ್ ಕರ್ಟೈನ್ಗಳು ಮೇಲೆ ಮತ್ತು ಕೆಳಗೆ ಇವೆ. ಸಬ್‌ಮರ್ಸಿಬಲ್ ಎಲ್ಪಿಜಿ ಪಂಪ್‌ಗಳು, ಫಿಲ್ ಲೈನ್‌ಗಳು ಮತ್ತು ಸುರಕ್ಷತಾ ಸಾಧನಗಳನ್ನು ಹೊಂದಿರುವ 6.5 ಮೀಟರ್ ವ್ಯಾಸದ ಆಪರೇಟಿಂಗ್ ಶಾಫ್ಟ್ ಇದೆ. ವಿವಿಧ ವಿಭಾಗಗಳನ್ನು ಸಂಪರ್ಕಿಸಲು 486.2 ಮೀಟರ್ ಉದ್ದದ ಸಂಪರ್ಕ ಸುರಂಗಗಳಿವೆ. ದೀರ್ಘಕಾಲೀನ ಬಾಳಿಕೆ ಮತ್ತು ಸುರಕ್ಷತೆಗಾಗಿ ಗಟ್ಟಿಯಾದ ಬಂಡೆಯೊಳಗೆ ನಿರ್ಮಿಸಲಾಗಿದೆ. ಸಂಗ್ರಹಣೆ ಆರಂಭಿಸುವ ಮೊದಲು, ಕ್ಯಾವರ್ನ್ ಅಕ್ಸೆಪ್ಟೆನ್ಸ್ ಟೆಸ್ಟ್ (CAT) ಎಂದು ಕರೆಯಲ್ಪಡುವ ಪರೀಕ್ಷೆ ನಡೆಸಲಾಯಿತು.
ಮೇ 9 ರಿಂದ ಜೂನ್ 6 ರವರೆಗೆ ವಿವಿಧ ರೀತಿಯ ಪರೀಕ್ಷೆಗಳು ನಡೆದವು. ಕ್ಯಾವರ್ನ್ ಒಳಗೆ ಗಾಳಿ ತುಂಬಿಸಿ ಒತ್ತಡ ಹೆಚ್ಚಿಸಲಾಯಿತು. ಒತ್ತಡ, ಭೂವೈಜ್ಞಾನಿಕ ಮತ್ತು ಉಪಕರಣಗಳ ಡೇಟಾವನ್ನು ಗಮನಿಸುವಾಗ ಸೋರಿಕೆ ಮೇಲ್ವಿಚಾರಣೆ ಮಾಡಲು ಎಲ್ಲಾ ದ್ವಾರಗಳನ್ನು 100 ಗಂಟೆಗಳಿಗೂ ಹೆಚ್ಚು ಕಾಲ ಮುಚ್ಚಲಾಯಿತು. ಕ್ರಮೇಣ ಒತ್ತಡ ಕಡಿಮೆ ಮಾಡಿ ಪರೀಕ್ಷಿಸಲಾಯಿತು. ಎಲ್ಲಾ ಹಂತಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಆ ಬಳಿಕ ಎಲ್ಪಿಜಿಯನ್ನು ಸುರಕ್ಷಿತವಾಗಿ ಸಂಗ್ರಹಿಸಲು ಸಿದ್ಧವಾಗಿದೆ ಎಂದು ದೃಢೀಕರಿಸಲಾಯಿತು.
ಇದು ಸಾಮಾನ್ಯ ಸಂಗ್ರಹಣಾಗಾರ ಮಾತ್ರವಲ್ಲ. ಯುದ್ಧ, ಆರ್ಥಿಕ ದಿಗ್ಬಂಧನಗಳು ಅಥವಾ ಅಂತರರಾಷ್ಟ್ರೀಯ ಎಲ್ಪಿಜಿ ಆಮದುಗಳಿಗೆ ಅಡ್ಡಿಯಾಗಬಹುದಾದ ನೈಸರ್ಗಿಕ ವಿಕೋಪಗಳಂತಹ ಸಂದರ್ಭಗಳಲ್ಲಿ ಇದು ಉಪಯುಕ್ತವಾಗಲಿದೆ. ಅಂತ ಸಂದರ್ಭಗಳಲ್ಲಿ ಈ ಕ್ಯಾವರ್ನ್ ಪ್ರಮುಖ ಪ್ರದೇಶಗಳಿಗೆ ಪೂರೈಕೆ ಕಡಿತವಾಗದಂತೆ ಬಫರ್ ಆಗಿ ಕಾರ್ಯನಿರ್ವಹಿಸಲಿದೆ.
ನವ ಮಂಗಳೂರು ಬಂದರಿನ ಮೂಲಕ ಆಮದು ಮಾಡಿಕೊಂಡ ಎಲ್ಪಿಜಿಯನ್ನು ಸಂಗ್ರಹಿಸಿ, ಅದನ್ನು ಮಂಗಳೂರು ಎಲ್ಪಿಜಿ ಬಾಟ್ಲಿಂಗ್ ಪ್ಲಾಂಟ್‌ಗೆ ಮತ್ತು ರಸ್ತೆ ಮತ್ತು ರೈಲು ಟ್ಯಾಂಕರ್‌ಗಳಿಗೆ ಪೂರೈಸುತ್ತದೆ. ದೇಶಾದ್ಯಂತದ ಪೈಪ್‌ಲೈನ್‌ಗಳ ಜಾಲ ಅನಿಲವನ್ನು ಮೈಸೂರು, ಬೆಂಗಳೂರು ಮತ್ತು ಹೈದರಾಬಾದ್‌ಗೆ ಸಾಗಿಸುತ್ತದೆ.
ಇಂಧನ ಭದ್ರತೆ ಹೆಚ್ಚಿಸುವ ಭಾರತದ ಪ್ರಯತ್ನಗಳಲ್ಲಿ ಈ ಯೋಜನೆ ಒಂದು ಪ್ರಮುಖ ಹೆಜ್ಜೆ ಎನ್ನಲಾಗುತ್ತಿದೆ. ದೇಶೀಯವಾಗಿ ಶುದ್ಧ ಇಂಧನಕ್ಕೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಗ್ರಾಮೀಣ ಮತ್ತು ನಗರ ಮನೆಗಳಲ್ಲಿ ಎಲ್ಪಿಜಿ ಬಳಕೆ ಹೆಚ್ಚಳಕ್ಕೆ ಒತ್ತು ನೀಡಲಾಗುತ್ತಿರುವ ಹಿನ್ನೆಲೆಯಲ್ಲೂ ಇದಕ್ಕೆ ಪ್ರಾಮುಖ್ಯತೆಯಿದೆ.
ಈ ಅತ್ಯಂತ ಸೂಕ್ಷ್ಮ ಸಂಗ್ರಹಾಗಾರ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಎಚ್ ಪಿ ಸಿ ಎಲ್ ಈ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ಕರ್ನಾಟಕ ವಿಧಾನ ಪರಿಷತ್ ನ ಸ್ಥಾಯಿ ಸಮಿತಿಗೆ ವಿವರಣೆ ನೀಡಿತ್ತು. ಯಾವುದೇ ಬಾಹ್ಯ ದಾಳಿ ಅಥವಾ ನೈಸರ್ಗಿಕ ದುರಂತಗಳ ಸಂದರ್ಭದಲ್ಲಿ ಹಾನಿಗೊಳಗಾಗದಂತೆ ಈ ಸ್ಥಾವರವನ್ನು ರೂಪಿಸಲಾಗಿದೆ. ಇದರಿಂದ ಪರಿಸರ ಹಾನಿಯೂ ಆಗದಂತೆ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಎಚ್ ಪಿ ಸಿ ಎಲ್ ಅಧಿಕಾರಿಗಳು ಪರಿಷತ್ ಸಮಿತಿಗೆ ಹೇಳಿದ್ದರು.