ಮಂಗಳೂರಿನ ಬಲ್ಮಠ-ಫಳ್ನೀರ್ ರಸ್ತೆ ಬದಿ ಪಾರ್ಕಿಂಗ್ ನಿಷೇಧ : ನಗರ ಪೊಲೀಸ್ ಆಯುಕ್ತರಿಂದ ಆದೇಶ
ಸಾಂದರ್ಭಿಕ ಚಿತ್ರ | PC : GROK
ಮಂಗಳೂರು,ಡಿ.11: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಬೆಂದೂರು ವಾರ್ಡಿನ ಯುನಿಟಿ ಆಸ್ಪತ್ರೆಯಿಂದ ಬಲ್ಮಠ ರಸ್ತೆಗೆ ಸಂಪರ್ಕಿಸುವ ವಾಸ್ಲೇನ್ ರಸ್ತೆಯನ್ನು ಅಗಲೀಕರಣಗೊಳಿಸಿ ರಸ್ತೆ ಬದಿಗಳನ್ನು ಇಂಟರ್ಲಾಕ್ನಿಂದ ನಿರ್ಮಾಣ ಮಾಡಲಾಗಿದೆ. ಇಲ್ಲಿ ವಾಹನ ಮತ್ತು ಜನದಟ್ಟಣೆಯಿರುವುದರಿಂದ ಬಲ್ಮಠ-ಫಳ್ನೀರ್ ರಸ್ತೆ ಬದಿ ಪಾರ್ಕಿಂಗ್ ನಿಷೇಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಪಳ್ನೀರು ಹಾಗೂ ಬಲ್ಮಠವನ್ನು ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು, ಪ್ರತಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಕಾರು, ದ್ವಿಚಕ್ರ ಇತ್ಯಾದಿ ವಾಹನಗಳು ಸಂಚರಿಸುತ್ತಿದೆ. ವಾಸ್ಲೇನ್ ರಸ್ತೆಯು ಹೆಚ್ಚಿನ ವಾಹನ ದಟ್ಟಣೆಯಿಂದ ಕೂಡಿದೆ. ಅಲ್ಲದೆ ಫಳ್ನೀರು ರಸ್ತೆಯಲ್ಲಿ ಯುನಿಟಿ, ಹೈಲ್ಯಾಂಡ್ ಆಸ್ಪತ್ರೆಗಳಿದ್ದು ಮತ್ತು ಬಲ್ಮಠ ರಸ್ತೆಯಲ್ಲಿ ಅನೇಕ ನಸಿರ್ಂಗ್ ಹೋಮ್ಗಳು ಇರುವುದರಿಂದ ತುರ್ತು ವಾಹನಗಳ ಹೆಚ್ಚಿನ ಸಂಚಾರ ಇರುತ್ತದೆ.
ವಾಸ್ಲೇನ್ ರಸ್ತೆಯ ಎರಡೂ ಬದಿ ಹೆಚ್ಚಿನ ವಸತಿ ಸಮುಚ್ಚಯಗಳಿದ್ದು, ಫಳ್ನೀರು ರಸ್ತೆಯಲ್ಲಿ ಯುನಿಟಿ ಆಸ್ಪತ್ರೆ, ವಾಣಿಜ್ಯ ಕಟ್ಟಡಗಳು, ಅನೇಕ ವೈದ್ಯರ ಕ್ಲಿನಿಕ್ ಗಳಿದೆ. ಇಲ್ಲಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ರಸ್ತೆಯಲ್ಲಿ ವಾಹನ ಪಾರ್ಕ್ ಮಾಡುತ್ತಿರುವುದರ ಪರಿಣಾಮ ಮುಖ್ಯ ರಸ್ತೆಯಾದ ಫಳ್ನೀರು ಹಾಗೂ ಬಲ್ಮಠ ರಸ್ತೆಯಲ್ಲಿ ಹೆಚ್ಚಿನ ವಾಹನ ದಟ್ಟಣೆ ಉಂಟಾಗುತ್ತಿರುತ್ತದೆ. ವಾಸ್ಲೇನ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದಲೂ ದೂರುಗಳು ಬಂದಿವೆ.
ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಗರದ ಯುನಿಟಿ ಆಸ್ಪತ್ರೆಯಿಂದ ಬಲ್ಮಠ ಸಂಪರ್ಕಿಸುವ ವಾಸ್ಲೇನ್ ರಸ್ತೆಯಲ್ಲಿ ವಾಸ್ಲೇನ್ ಒಂದನೇ ಅಡ್ಡ ರಸ್ತೆಯಿಂದ ಯುನಿಟಿ ಆಸ್ಪತ್ರೆಯವರೆಗೆ (ರಸ್ತೆಯ ಬಲಬದಿ-ಪಶ್ಚಿಮ ದಿಕ್ಕು) ವಾಹನಗಳ ನಿಲುಗಡೆಯನ್ನು ನಿಷೇಧಿಸಿ ನೋ ಪಾರ್ಕಿಂಗ್ ವಲಯ ಎಂದು ಘೋಷಿಸಲಾಗಿದೆ ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.