×
Ad

ಪ್ರೀತಿ ದ್ವೇಷವನ್ನು ಗೆಲ್ಲುತ್ತದೆ ಎಂಬ ಸತ್ಯ ನಮ್ಮದಾಗಲಿ: ಮಂಗಳೂರು ಬಿಷಪ್‌ರಿಂದ ಕ್ರಿಸ್‌ಮಸ್ ಸಂದೇಶ

Update: 2025-12-23 15:05 IST

ಮಂಗಳೂರು, ಡಿ.23: ಪ್ರೀತಿ, ಸತ್ಯ ಮತ್ತು ಶಾಂತಿಯ ಬೆಳಕು ನಮ್ಮ ಮನ ಮನೆಗಳಲ್ಲಿ ಮಾತ್ರವಲ್ಲ, ಸಾರ್ವಜನಿಕ ವ್ಯವಸ್ಥೆ ಹಾಗೂ ಎಲ್ಲಾ ರೀತಿಯ ಸಂಸ್ಥೆ ಮತ್ತು ರಾಷ್ಟ್ರದ ನಿರ್ಧಾರಗಳಲ್ಲಿಯೂ ಹೊಳೆಯಲಿ. ಬೆಳಕು ಕತ್ತಲನ್ನು ನಿವಾರಿಸುತ್ತದೆ. ಪ್ರೀತಿ ದ್ವೇಷವನ್ನು ಗೆಲ್ಲುತ್ತದೆ ಮತ್ತು ಶಾಂತಿ ಭಯವನ್ನು ಹೋಗಲಾಡಿಸುತ್ತದೆ ಎಂಬ ಸತ್ಯ ನಮ್ಮದಾಗಲಿ ಎಂದು ಮಂಗಳೂರು ಬಿಷಪ್ ಅತೀ ವಂ. ಡಾ. ಪೀಟರ್ ಪಾವ್ಲ್ ಸಲ್ಡಾನಾ ಕ್ರಿಸ್‌ಮಸ್ ಸಂದೇಶ ನೀಡಿದ್ದಾರೆ.

ಮಂಗಳೂರು ಬಿಷಪ್ ಹೌಸ್‌ನಲ್ಲಿ ಮಂಗಳವಾರ ಸುದ್ದಿಗಾರರ ಜತೆ ಕ್ರಿಸ್‌ಮಸ್ ಹಬ್ಬದ ಪ್ರಾರ್ಥನೆಯೊಂದಿಗೆ ಸಂದೇಶ ನೀಡಿದ ಅವರು, 2025ನೆ ಸಾಲಿನ ಕ್ರಿಸ್‌ಮಸ್ ಹಬ್ಬವು ದೇಶಕ್ಕೆ ಶಾಂತಿ, ಸಮಾಜಕ್ಕೆ ಸಮನ್ವಯ, ಸಾರ್ವಜನಿಕ ಬದುಕಿಗೆ ನೈತಿಕ ಪುನರುಜ್ಜೀವನ ಮತ್ತು ಪ್ರತಿಯೊಬ್ಬ ನಾಗರಿಕನ ಜೀವನಕ್ಕೆ ಭರವಸೆಯ ಹೊಸ ಕಿರಣ ತಂದುಕೊಡಲಿ ಎಂದು ಆಶಿಸಿದರು.

ಸಮಾಜದಲ್ಲಿ ಹಿಂಸೆ, ವಂಚನೆ, ತಪ್ಪು ಆಹಿತಿ ಮತ್ತು ಪರಸ್ಪರ ಅವಿಶ್ವಾಸವ್ನ ಉತ್ತೇಜಿಸುವ ಸವಾಲುಗಳು ಹೆಚ್ಚುತ್ತಿವೆ. ಸಾರ್ವಜನಿಕ ವಲಯಗಳಲ್ಲಿ ಸತ್ಯ, ನ್ಯಾಯ ಮತ್ತು ಸೌಹಾರ್ದ ಕುಂದುತ್ತಿರುವುದು ದೇಶದ ಭವಿಷ್ಯದ ಹಿತದೃಷ್ಟಿಯಿಂದ ಚಿಂತಾಜನಕವಾಗಿ ಪರಿಣಮಿಸಿದೆ. ವ್ಯಕ್ತಿಯ ಖಾಸಗಿತನ, ಗೌರವಯುತ ಜೀವನ ಹಾಗೂ ಧಾರ್ಮಿಕ ಸ್ವಾತಂತ್ರ್ಯದಂತಹ ಮೂಲಭೂತ ಹಕ್ಕುಗಳು ದಿನದಿಂದ ದಿನಕ್ಕೆ ಅಪಾಯದ ಅಂಚಿಕೆ ಹೋಗುತ್ತಿದೆ. ಜಾತಿ, ಧರ್ಮ, ಕುಲ, ಅಂತಸ್ತು ಇವುಗಳ ಆಧಾರದ ಮೇಲೆ ಒಬ್ಬರಿಗೊಬ್ಬರು ಎತ್ತಿಕಟ್ಟುವುದು ಹೆಚ್ಚುತ್ತಿದೆ. ದಿನನಿತ್ಯ ಮುಗ್ದ ಜನರು ವಂಚಕರಿಂದ ಬಲಿಪಶುಗಳಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯೇಸುವಿನ ಜನನ ದಿನವು ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಹಾಗೂ ಪ್ರತಿಯೊಂದು ಸಂಸ್ಥೆಗೂ ಪರಸ್ಪರ ಗೌರವ ಬೆಳೆಸಲು, ಪ್ರತಿಯೊಬ್ಬರ ಘನತೆಯನ್ನು ಕಾಪಾಡಲು ನ್ಯಾಯ, ಅಸತ್ಯ ಮತ್ತು ಭ್ರಷ್ಟಾಚಾರನ್ನು ನಿವಾರಿಸಲು ಹಾಗೂ ಹಿಂಸೆಗೆ ಬದಲಾಗಿ ಶಾಂತಿ ಮತ್ತು ಸಂವಾದದ ಮಾರ್ಗವನ್ನು ಅನುಸರಿಲು ಕರೆ ನೀಡುತ್ತದೆ ಎಂದವರು ಹೇಳಿದರು.

ಕ್ರಿಸ್‌ಮಸ್ ವಿಶೇಷ್ ಪ್ರಾರ್ಥನೆಯ ಜತೆಗೆ ಸಹ ಭೋಜನದ ಮೂಲಕ ಕ್ರಿಸ್‌ಮಸ್ ಸಂತಸವನ್ನು ಬಿಷಪ್‌ರವರು ಹಂಚಿಕೊಂಡರು.

ಈ ಸಂದರ್ಭ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ವಂ. ಡಾ. ಜಾನ್ ಬ್ಯಾಪ್ಟಿಸ್ ಸಲ್ಡಾನ, ರಾಯ್ ಕ್ಯಾಸ್ತಲಿನೊ, ಪಾಲನಾ ಪರಿಷತ್ ಕಾರ್ಯದರ್ಶಿ ಜಾನ್ ಡಿಸಿಲ್ವ, ವಿಕಾರ್ ಜೆರಲ್ ಮ್ಯಾಕ್ಸಿಂ ನೊರೊನ್ನಾ, ಮಾಧ್ಯಮ ಸಂಯೋಜಕ ಇಲಿಯಾಸ್ ಫೆರ್ನಾಂಡಿಸ್, ರ್ಯಾಕ್ಣೋ ಪತ್ರಿಕೆಯ ಸಂಪಾದಕ ವಂ. ರೂಪೇಶ್ ಮಾಡ್ತ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News