×
Ad

ಮನರೇಗಾ ಹೆಸರು ಬದಲಾವಣೆ ಕೇಂದ್ರ ಸರಕಾರದ ದ್ವೇಷದ ರಾಜಕಾರಣ: ಐವನ್ ಆರೋಪ

Update: 2025-12-23 15:02 IST

ಮಂಗಳೂರು, ಡಿ.23: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ತಿದ್ದುಪಡಿ ಮಾಡಿ ಹೊಸ ಹೆಸರಿನ ಮೂಲಕ ಕೇಂದ್ರ ಸರಕಾರ ದ್ವೇಷದ ರಾಜಕಾರಣ ನಡೆಸುತ್ತಿದೆ ಎಂದು ವಿಧಾನ ಪರಿಷತ್‌ನ ಸದಸ್ಯ ಐವನ್ ಡಿಸೋಜಾ ಆರೋಪಿಸಿದ್ದಾರೆ.

ಲಾಲ್‌ಬಾಗ್‌ನ ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ರಾಜ್ಯ ಸರಕಾರಗಳನ್ನು ನಿರ್ಲಕ್ಷ್ಯ ಮಾಡಿ ಸಂಬಂಧ ಕೆಡುವ ರೀತಿಯಲ್ಲಿ ಕಾನೂನು ತರುತ್ತಿದೆ. ಇದು ದೇಶದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಒಕ್ಕೂಟ ವ್ಯವಸ್ಥೆಯನ್ನು ಹಾಳುಮಾಡುವ ಕೆಲಸ ನಡೆಯುತ್ತಿದೆ. ಯುಪಿಎ ಸರಕಾರದ ಆಡಳಿತಾವಧಿಯಲ್ಲಿ ಮನರೇಗ ಯೋಜನೆಯ ಮೂಲಕ 100 ದಿನಗಳ ಉದ್ಯೋಗ ಖಾತ್ರಿಯನ್ನು ಒದಗಿಸುವ ಜತೆಗೆ ಶೇ. 90ರಷ್ಟು ಅನುದಾನವನ್ನು ಒದಗಿಸುತ್ತಿತ್ತು. ಇದು ಅತ್ಯಂತ ಜನಪ್ರಿಯ ಯೋಜನೆಯಾಗಿ ರೂಪುಗೊಂಡಿದ್ದು, ಬಡ ಕಾರ್ಮಿಕರು, ಕೂಲಿಕಾರ್ಮಿಕರು ತಮ್ಮ ಮನೆ ನಿರ್ಮಾ, ತೋಡು ನಿರ್ಮಾಣದಂತಹ ಕಾರ್ಯಗಳಿಗೆ ಸಹಕಾರಿಯಾಗಿತ್ತು. ದೇಶಕ್ಕೆ ಅಹಿಂಸೆಯ ಮಾರ್ಗದ ಮೂಲಕ ಸ್ವಾತಂತ್ರ್ಯದ ನೇತೃತ್ವ ವಹಿಸಿದ್ದ ಗಾಂಧಿ ಹೆಸರನ್ನು ಯೋಜನೆಗೆ ಇಡಲಾಗಿತ್ತು. ಇದೀಗ ಆ ಹೆಸರನ್ನು ತೆಗೆಯುವ ಕೆಲಸ ಖಂಡನೀಯ. ಮೋದಿಯವರು ಪ್ರಧಾನಿ ಆಗಬೇಕಿದ್ದರೂ ಮಹಾತ್ಮ ಗಾಂಧಿಯ ನೆನಪು ತೆಗದೇ ಆಗಬೇಕಿತ್ತು. ಆದರೆ ಬಿಜೆಪಿ ಇದೀಗ ಸ್ವಾರ್ಥ ರಾಜಕಾರಣ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಮನರೇಗಾದ ಹೆಸರು ಬದಲಾವಣೆ ಮಾಡಬಾರದು ಎಂದು ಐವನ್ ಡಿಸೋಜಾ ಆಗ್ರಹಿಸಿದರು.

ಕರ್ನಾಟ ವಿಧಾನ ಪರಿಷತ್‌ನ 157ನೆ ಅಧಿವೇಶನದಲ್ಲಿ 50 ಪ್ರಶ್ನೆಗಳನ್ನು ಕೇಳಿದ್ದು, ಸಂಬಂಧಪಟ್ಟ ಸಚಿವರಿಂದ ಉತ್ತರ ದೊರಕಿದೆ. ನಗರ ಪೊಲೀಸ್ ಕಮಿಷನರೇಟ್ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಅಧಿಕಾರಿ ಸಿಬ್ಬಂದಿ ಕೊರತೆ ಬಗ್ಗೆ ಪ್ರಸ್ತಾವಿಸಿದ್ದು, ಸಿಬ್ಬಂದಿ ಬಲ ಹೆಚ್ಚಿಸುವ ಪ್ರಸ್ತಾವನೆ ಪರಿಶೀಲನಾ ಹಂತದಲ್ಲಿರುವುದಾಗಿ ಡಾ. ಜಿ. ಪರಮೇಶ್ವರ ಅವರು ಉತ್ತರಿಸಿದ್ದಾರೆ ಎಂದರು.

ಹೈಕೋರ್ಟ್ ಪೀಠ ಸ್ಥಾಪನೆಯ ಕುರಿತಂತೆಯೂ ಮತ್ತೆ ಸದನದಲ್ಲಿ ಪ್ರಸ್ತಾವಿಸಿದ್ದು, ಪರಿಶೀಲನೆ ಹಂತದಲ್ಲಿರುವುದಾಗಿ ಉತ್ತರ ಬಂದಿದೆ ಎಂದರು.

ಗೋಷ್ಟಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ಸತೀಶ್ ಪೆಂಗಲ್, ಭಾಸ್ಕರ ರಾವ್, ಇಮ್ರಾನ್ ಎ.ಆರ್., ನೀತು ಡಿಸೋಜಾ, ಚಂದ್ರಹಾಸ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News